ನೇಪಾಳದಲ್ಲಿ ತುಳು-ಕನ್ನಡ ಕಲರವ

ನೇಪಾಳ: ಪಶುಪತಿನಾಥನ ಪೂಜಾ ವಿಧಾನಗಳು ಸಂಪೂರ್ಣವಾಗಿ ವೈವಿಧ್ಯ ವಾಗಿದೆ. ತುಳುನಾಡಿನ ಮೂಲದವರಾದ ಶಿವಳ್ಳಿ ಬ್ರಾಹ್ಮಣರಿಗೆ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂದು ನೇಪಾಳದ ಕಟ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ರಾವಲ್ ಗಣೇಶ ಭಟ್ ಅವರು ಹೇಳಿದರು.
ಅವರು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ತುಳು-ಕನ್ನಡ ಸ್ನೇಹ ಸಮ್ಮೇಳನನದಲ್ಲಿ ಅವರು ಮಾತನಾಡಿದರು.
ತುಳು ಮತ್ತು ಕನ್ನಡ ಭಾಷೆ ಪರಸ್ಪರ ಅನ್ಯೋನ್ಯವಾಗಿದೆ. ಕರ್ನಾಟಕ ಪ್ರಧಾನ 2 ದ್ರಾವಿಡ ಭಾಷೆಗಳು ಇರುವ ಮಾದರಿ ರಾಜ್ಯವಾಗಿದೆ. ಆದುದರಿಂದ ಕನ್ನಡಿಗರು ಸೇರಿ ತುಳು ಭಾಷೆಯ ಸ್ಥಾನಮಾನಕ್ಕೆ ಪ್ರಯತ್ನಿಸಿ ತಮ್ಮದೇ ರಾಜ್ಯದ ಇನ್ನೊಂದು ಭಾಷೆಗೆ ಸ್ಥಾನಮಾನ ದೊರಕುವಲ್ಲಿ ಪ್ರಯತ್ನಿಸಿದರೆ ತುಳು-ಕನ್ನಡ ಕಾದ ಸಂಪನ್ನ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಮಾತನಾಡಿ, ಪ್ರಾದೇಶಿಕತೆ ಉಳಿದರೆ ಮಾತ್ರವೇ ದೇಶಿಯತೆ ಉಳಿಯುತ್ತದೆ ಪ್ರಾದೇಶಿಕತೆ ಉಳಿಯಬೇಕಿದ್ದರೆ ಪ್ರಾದೇಶಿಕ ಸಂಸ್ಕೃತಿ ಮತ್ತು ಭಾಷೆಗಳನ್ನು ಮೇಲೆತ್ತುವ ಪ್ರಯತ್ನವಾಗಬೇಕು.

ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ನ್ಯಾ. ಸುಬ್ಬಯ್ಯ ರೈ, ಮಂಜುಳಾ ಗಣೇಶ್ ಭಟ್ ನೇಪಾಳ, ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ಇದರ ಪ್ರಾಧ್ಯಾಪಕ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ, ಮೂಲ್ಕಿ ವಿಜಯ ಕಾಲೇಜಿನ ಟ್ರಸ್ಟಿಗಳಾದ ಶ್ರೀಮತಿ ಶಮೀನಾ ಆಳ್ವಾ, ಮಂಗಳೂರು ವಿಶ್ವವಿದ್ಯಾಲಯದ ತುಳು ಪೀಠದ ಸದಸ್ಯರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತ ಕುಂಟಿನಿ, ಚಲನಚಿತ್ರ ನಟಿಯರಾದ ಚೈತ್ರ ಶೆಟ್ಟಿ, ಲಕ್ಷ್ಯ ಶೆಟ್ಟಿ, ಸನಾತನಧರ್ಮ ಪ್ರಚಾರಕ ನವೀನ್ ಕುಮಾರ್, ಉದ್ಯಮಿಗಳಾದ ಲಯನ್ ಗಣೇಶ್ ಶೆಟ್ಟಿ, ಕೋಡ್ದಬ್ಬು ದೈವಸ್ಥಾನ ಪದ್ದೊಡಿ ಇದರ ಅಧ್ಯಕ್ಷರಾದ ಅಶೋಕ್ ಮಾಡ, ಭೂಷಣ್ ಕುಲಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೇಪಾಳದ ಹುಡುಗಿ ರೇಷ್ಮಾ ಅವರು ಕನ್ನಡದಲ್ಲಿ ಮಾತನಾಡಿ ಕನ್ನಡದ ಗೀತೆಗಳನ್ನು ಹಾಡಿ ನೇಪಾಳಿಗರ ಕನ್ನಡ ಪ್ರೀತಿಯ ಕಂಪನ್ನು ಮೆರೆಸಿದರು.

ಮೂಡುಬಿದಿರೆಯ ಹೆರಾಲ್ಡ್ ತಾವ್ರೋ ಅವರು ತುಳುವಿನಲ್ಲಿ ಗಣೇಶನ ಪ್ರಾರ್ಥನೆ ಹಾಡಿ ಸೌಹಾರ್ದತೆಗೆ ಮುನ್ನುಡಿ ಬರೆದರು. ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಬರೆದ ದೇಶದ ಚಿತ್ತ ಯುವಜನರತ್ತ ಪುಸ್ತಕವನ್ನು ನೇಪಾಳದ ಮಂಜುಳಾ ಗಣೇಶ್ ಭಟ್ ಅವರು ಬಿಡುಗಡೆಗೊಳಿಸಿದರು. ಹಾಗೂ ತುಳು ಕನ್ನಡ ಭಾಷೆಗೆ ಕೊಡುಗೆ ನೀಡಿದ ಹಲವು ಗಣ್ಯರಿಗೆ ಇಂಡೋ ನೇಪಲ್ ತುಳು ಕನ್ನಡ ಸ್ನೇಹ ಪ್ರಶಸ್ತಿ ನೀಡಿ ಗೌರವಿಸಿದರು.

ತುಳುವರ್ಲ್ಡ್ ಅಧ್ಯಕ್ಷರಾದ ಡಾ. ರಾಜೇಶ್ ಆಳ್ವ ಪ್ರಸ್ತಾವನೆಗೈದರು. ಸಂಭ್ರಮ ಬೆಂಗಳೂರು ಇದರ ಅಧ್ಯಕ್ಷರಾದ ಜೋಗಿಲ ಸಿದ್ದರಾಜು ಅವರು ಸ್ವಾಗತಿಸಿ, ತುಳುವರ್ಲ್ಡ್ ಕಾರ್ಯದರ್ಶಿ ಹರ್ಷ ರೈ ಪುತ್ರಕಳ ವಂದಿಸಿದರು. ಶೃತಿ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು.