ರಾಜ್ಯಾದ್ಯಂತದ ಅಂಗನವಾಡಿಗಳಲ್ಲಿ ಮೊದಲನೆ ಹಂತದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ

ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ 26 ಸ್ಥಾನಮಾನ ಪತ್ರಗಳನ್ನು ಸಲ್ಲಿಸಿದೆ. ವಸತಿ ಸಚಿವ ವಿ ಸೋಮಣ್ಣ ತಮ್ಮ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಈ ವಿಷಯ ಪ್ರಕಟಿಸಿದ್ದಾರೆ.

“ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಿದ್ದು, ಮೊದಲ ಹಂತದಲ್ಲಿ ರಾಜ್ಯಾದ್ಯಂತದ ಅಂಗನವಾಡಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಮುಂದಿನ ಹಂತದಲ್ಲಿ ಎನ್‌ಇಪಿ ಅನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ವಿಸ್ತರಿಸಲಾಗುವುದು. ಕೇಂದ್ರ ಶಿಕ್ಷಣ ಸಚಿವಾಲಯವು ಎನ್‌ಇಪಿ ಅನ್ನು ಜಾರಿಗೆ ತರುವ ನಮ್ಮ ಪ್ರಯತ್ನಗಳನ್ನು ಶ್ಲಾಘಿಸಿದೆ, ”ಎಂದು ನಾಗೇಶ್ ಹೇಳಿದ್ದಾರೆ.

ಅಂಗನವಾಡಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಎನ್‌ಇಪಿ ಪ್ರಕಾರ ಪಠ್ಯಕ್ರಮವನ್ನು ರೂಪಿಸಲಿದೆ. ಎನ್‌ಇಪಿ ಅಡಿಯಲ್ಲಿ ಅಂಗನವಾಡಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಮಾಹಿತಿ ನೀಡಿದ್ದಾರೆ.

ಉನ್ನತ ಶಿಕ್ಷಣ ಮಟ್ಟದಲ್ಲಿ ಎನ್‌ಇಪಿ ಅನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಪದವಿಪೂರ್ವ ಕೋರ್ಸ್‌ಗಳಲ್ಲಿ ಎನ್‌ಇಪಿ ವಿದ್ಯಾರ್ಥಿಗಳ ಮೊದಲನೆ ಬ್ಯಾಚ್ ಇತ್ತೀಚೆಗೆ ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ.