ವಿಧಾನಪರಿಷತ್‌ ಚುನಾವಣೆಯಲ್ಲಿ ಕ್ರೈಸ್ತರ ಅವಗಣನೆ ಸಮುದಾಯಕ್ಕೆ ಮಾಡಿದ ಅಪಮಾನ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಡಿಯೋನ್‌ ಡಿʼಸೋಜಾ

ಉಡುಪಿ: ವಿಧಾನಪರಿಷತ್‌ ಚುನಾವಣೆಯಲ್ಲಿ ಕ್ರೈಸ್ತ ಅಭ್ಯರ್ಥಿಗೆ ಅವಕಾಶ ನೀಡದಿರುವ ಕಾಂಗ್ರೆಸ್‌ ಪಕ್ಷದ ನಿಲುವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಡಿಯೋನ್‌ ಡಿʼಸೋಜಾ ಖಂಡಿಸಿದ್ದು ಇದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಐವನ್ ಡಿಸೋಜಾ ಅವರಂತಹ ನಾಯಕರ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪಕ್ಷದ ಬದ್ಧತೆಯನ್ನು ಕೆಪಿಸಿಸಿ ಪದೇ ಪದೇ ಕಡೆಗಣಿಸುತ್ತಿದೆ. ಕ್ರಿಶ್ಚಿಯನ್ನರನ್ನು ಇತ್ತೀಚಿನ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರದವರೆಗಿನ ಚುನಾವಣೆಗಳಿಂದ ದೂರವಿರಿಸಿ ಅವರನ್ನು ದೃಢವಾದ ಮತ ಬ್ಯಾಂಕ್ ಎಂದು ಪರಿಗಣಿಸುವ ಕಾಂಗ್ರೆಸ್ ವಾಸ್ತವದಿಂದ ದೂರವಿದೆ.

ಕ್ರಿಶ್ಚಿಯನ್ ಸಮುದಾಯವು ಅಲ್ಪಸಂಖ್ಯಾತರಾಗಿದ್ದರೂ, ದೇಶಾದ್ಯಂತ ನಿಷ್ಪಕ್ಷಪಾತ ಮತ್ತು ಪಾರದರ್ಶಕ ಚುನಾವಣೆಗಳಲ್ಲಿ ಭಾಗವಹಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ. ಕಾಂಗ್ರೆಸ್ ಪಕ್ಷದ ಜನಪರ ಕೆಲಸ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚುವುದರ ಮೂಲಕ ಕ್ರಿಶ್ಚಿಯನ್ನರು ಯಾವಾಗಲೂ ಪಕ್ಷದ ಕಡೆಗೆ ತಮ್ಮ ಒಲವನ್ನು ತೋರಿಸಿದ್ದಾರೆ ಎನ್ನುವುದನ್ನು ಪಕ್ಷ ಮರೆತಿದೆ. ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಪ್ರಾತಿನಿಧ್ಯವನ್ನು ಕಡೆಗಣಿಸಿರುವ ಕಾಂಗ್ರೆಸ್‌ನ ನಿರ್ಧಾರಗಳು ಸಮುದಾಯಕ್ಕೆ ನೋವನ್ನು ತಂದಿದ್ದು, ರಾಜಕೀಯದಲ್ಲಿ ಕ್ರಿಶ್ಚಿಯನ್ ಪ್ರಾತಿನಿಧ್ಯ ನೀಡುವ ಬಗ್ಗೆ ಪಕ್ಷದ ನಿರ್ಲಕ್ಷ್ಯತನವನ್ನು ತೋರಿಸುತ್ತದೆ.

ಕರ್ನಾಟಕದ ಮೇಲ್ಮನೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಒಂದೇ ಒಂದು ಪ್ರಾತಿನಿಧ್ಯ ಇಲ್ಲದಿರುವಾಗ ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿಯ ಅಗತ್ಯ ಏನಿತ್ತು? ಈಗಿನ ಕೋಮುವಾದಿ ಬಿಜೆಪಿ ಸರಕಾರದಿಂದ ಕ್ರೈಸ್ತರು ಸಮಸ್ಯೆ ಎದುರಿಸುತ್ತಿರುವುದನ್ನು ಕಾಂಗ್ರೆಸ್‌ ಪಕ್ಷ ಮರೆತಿದೆಯೇ? ಅಥವಾ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಪ್ರಾತಿನಿಧ್ಯ ಅಥವಾ ಮತಗಳು ಮುಖ್ಯವಲ್ಲ ಎಂದು ಕಾಂಗ್ರೆಸ್ ಭಾವಿಸುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ನಿರ್ಲಕ್ಷ್ಯವು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ ಉಳಿಯಬಹುದು ಮತ್ತು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ತಮ್ಮ ಜನರನ್ನು ಮನವೊಲಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕ್ರಿಶ್ಚಿಯನ್ ನಾಯಕರಿಗೆ ಪ್ರಮುಖ ಸವಾಲಾಗಿ ಪರಿಣಮಿಸಬಹುದು. ದೇಶದ ಕಾನೂನು ಮತ್ತು ಸಂಸ್ಕೃತಿಯನ್ನು ಪಾಲಿಸುವ ನಿಷ್ಠಾವಂತ ಕ್ರಿಶ್ಚಿಯನ್ ಸಮುದಾಯವು ಕಾಂಗ್ರೆಸ್‌ ನಿಂದ ಈಗಾಗಲೇ ಬಹಳ ದೂರದಲ್ಲಿದೆ. ಸಮುದಾಯದ ಹಕ್ಕುಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್‌ಗೆ ಯಾವುದೇ ಏಕಸ್ವಾಮ್ಯವಿಲ್ಲ ಮತ್ತು ಪದೇ ಪದೇ ಸಮುದಾಯವನ್ನು ನಿರ್ಲಕ್ಷಿಸಿದರೆ ಅದು ಪಕ್ಷದ ಆಯ್ಕೆಯತ್ತ ಮನಸ್ಥಿತಿಯನ್ನು ಬದಲಾಯಿಸಬಹುದು. ಈಗಾಗಲೇ ಚರ್ಚ್ ನಾಯಕರು ಜನರು ಯಾರಿಗೆ ಬೇಕಾದರೂ ಮತ ಹಾಕಬಹುದು ಎಂದು ಹೇಳಲು ಪ್ರಾರಂಭಿಸಿದ್ದಾರೆ. ಯುವ ಸಮುದಾಯ ಬೇರೆ ಪಕ್ಷಗಳತ್ತ ಮುಖ ಮಾಡಿದೆ.

ಕರ್ನಾಟಕ ಸರ್ಕಾರದಲ್ಲಿ ಕ್ರಿಶ್ಚಿಯನ್ನರಿಗೆ ಸ್ಥಾನವನ್ನು ಪದೇ ಪದೇ ನಿರಾಕರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲಿದ್ದ ಕ್ರಿಶ್ಚಿಯನ್ನರ ನಂಬಿಕೆ ಈಗಾಗಲೇ ಕಡಿಮೆಯಾಗಿದೆ ಮತ್ತು ಮುಂಬರುವ ರಾಜ್ಯಸಭಾ ಚುನಾವಣೆಯಾಲ್ಲಿ ಕರ್ನಾಟಕದಿಂದ ಐವನ್ ಡಿಸೋಜಾ ಅವರಂತಹ ಪ್ರಬಲ ಕ್ರಿಶ್ಚಿಯನ್ ಅಭ್ಯರ್ಥಿಯನ್ನು ನಿಲ್ಲಿಸಲು ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ನಿರಾಕರಿಸಿದಲ್ಲಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕ್ರಿಶ್ಚಿಯನ್ ಮತಗಳನ್ನು ಎಣಿಸುವುದು ಖಂಡಿತವಾಗಿಯೂ ಕಷ್ಟಕರವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.