ಕಳೆದ ಐದು ವರ್ಷಗಳಲ್ಲಿ ಮೂರು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪ್ರತಿಭಟನಾಕಾರರೊಂದಿಗೆ ಮಾತಾಡಲು ಕೇಂದ್ರ ಸರ್ಕಾರಕ್ಕೆ ಭಯ ಯಾಕೆ: ಅಣ್ಣಾಮಲೈ

ಚೆನ್ನೈ: ಕಳೆದ ಐದು ವರ್ಷಗಳಲ್ಲಿ ಮೂರು ಬಾರಿ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಏಕೆ ವಿಳಂಬ ಮಾಡಿತು, ಏಕೆ ಸರಕಾರಕ್ಕೆ ಭಯ? ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ನಾನು ಹಲವು ವರ್ಷಗಳಿಂದ ನೀಟ್ ಪರೀಕ್ಷೆಯನ್ನು ಬೆಂಬಲಿಸುವ ನಿಲುವು ಹೊಂದಿದ್ದೇನೆ. ದೇಶಾದ್ಯಂತ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯಲ್ಲಿ ಏಕರೂಪತೆ ತರಲು ಹಾಗೂ ಗ್ರಾಮೀಣ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ನೀಟ್ ಸಹಕಾರಿಯಾಗಿದೆ ಎಂದು ನಂಬಿದ್ದೇನೆ” ಎಂದು ಹೇಳಿದ್ದಾರೆ.

ಆದರೆ, “ಕಳೆದ ಐದು ವರ್ಷಗಳಲ್ಲಿ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಮೂರು ಬಾರಿ ಸೋರಿಕೆಯಾಗಿದೆ. ಪಾರದರ್ಶಕತೆ ಮತ್ತು ವಿಶ್ವಾಸ ಮೂಡಿಸಬೇಕಾದ ವ್ಯವಸ್ಥೆಯೇ ವಿಫಲವಾದಾಗ, ಮರುಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ಊಹಿಸಬಹುದು. ಇಷ್ಟಾದರೂ ಯಾರ ಮೇಲೂ ಹೊಣೆಗಾರಿಕೆ ನಿಗದಿಯಾಗಿಲ್ಲ. ಇದರಿಂದಲೇ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಟೀಕಿಸಿದ್ದಾರೆ.

ಪ್ರತಿಭಟನೆಯ ಆರಂಭದಲ್ಲೇ ವಿದ್ಯಾರ್ಥಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕಿತ್ತು. “ಪ್ರತಿಭಟನೆ ತೀವ್ರಗೊಳ್ಳುವವರೆಗೆ ಕೇಂದ್ರ ಸರ್ಕಾರ ಅರ್ಥಪೂರ್ಣ ಸಂವಾದ ನಡೆಸದೇ ಇದ್ದದ್ದು ಏಕೆ? ಪ್ರತಿಭಟನಾಕಾರರೊಂದಿಗೆ ಮಾತನಾಡಲು ಇಷ್ಟು ವಿಳಂಬವಾಗಲು ಕಾರಣವೇನು?” ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.

ಇದೇ ವೇಳೆ, “ಯಾವುದೇ ರಾಷ್ಟ್ರದ ಬಲ ಅದರ ಯುವಜನರು ಶಿಕ್ಷಣ ಸಂಸ್ಥೆಗಳು ಹಾಗೂ ವ್ಯವಸ್ಥೆಗಳ ಮೇಲೆ ಇಡುವ ವಿಶ್ವಾಸದಲ್ಲಿದೆ. ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ, ಅದು ರಾಷ್ಟ್ರದ ಭವಿಷ್ಯಕ್ಕೂ ಅಪಾಯಕಾರಿಯಾಗಲಿದೆ” ಎಂದು ಅವರು ಎಚ್ಚರಿಸಿದ್ದಾರೆ.