NEET Protest: ಆಸ್ಪತ್ರೆಯಲ್ಲಿ ಸೊನಮ್ ವಾಂಗ್ರೂಕ್ ಭೇಟಿಯಾದ ಕೇಂದ್ರ ಸಚಿವರುಪಿಟಿಐ

ನವದೆಹಲಿ: ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೋರಾಟಗಾರ ಸೊನಮ್ ವಾಂಗ್ಟಕ್ ಅವರನ್ನು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಜಿತೇಂದ್ರ ಸಿಂಗ್‌ ಅವರು ಮಂಗಳವಾರ ತಡರಾತ್ರಿ ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸೊನಮ್ ವಾಂಗ್ಟಕ್ ಅವರನ್ನು, ದೆಹಲಿ ಹೈಕೋರ್ಟ್‌ ಆದೇಶದಂತೆ ಅಲ್ಲಿನ ಪೊಲೀಸರು ಸಫರ್‌ಜಂಗ್ ಆಸ್ಪತ್ರೆಗೆ ಬಲವಂತವಾಗಿ ಕರೆದೊಯ್ದಿದ್ದರು.
ಸಫರ್‌ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ಕೋರಿ ವಾಂಗ್ಟಕ್ ಪತ್ನಿ ಗೀತಾಂಜಲಿ ಜೆ. ಆಂಗೋ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸೊನಮ್ ವಾಂಗ್ಟಕ್ ಅವರನ್ನು ಮಂಗಳವಾರ(ಜುಲೈ 22) ರಾತ್ರಿ 7.30ರ ಸುಮಾರಿಗೆ ಬಿಗಿ ಭದ್ರತೆಯೊಂದಿಗೆ ಆಂಬ್ಯುಲೆನ್ಸ್‌ ಮೂಲಕ ಮೇದಾಂತ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಅವರನ್ನು ಐಸಿಯು ಅಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.