ನೀಟ್‌ ಪೇಪರ್‌ ಲೀಕ್‌ ಸಾಮಾನ್ಯ ವಿಷಯವಲ್ಲ’: ಪ್ರಧಾನಿ ನರೇಂದ್ರ ಮೋದಿಯಿಂದ ಮೊದಲ ವಿಡಿಯೋ ಸಂದೇಶ -ತಪ್ಪಿತಸ್ಥರ ವಿರುದ್ಧ ಏನೆಲ್ಲಾ ಕ್ರಮಗಳು

ಪ್ರಧಾನಿ ನರೇಂದ್ರ ಮೋದಿಯವರು, ವಿಡಿಯೋ ಸಂದೇಶದ ಮೂಲಕ ನೀಟ್ ಪೇಪರ್‌ ಲೀಕ್‌ ಘಟನೆ ವಿರುದ್ಧ ಸರಕಾರ ಕೈಗೊಂಡ ಕ್ರಮಗಳು, ಇನ್ನು ಮುಂದೆ ಕೈಗೊಳ್ಳಲಿರುವ ಕಠಿಣ ಕ್ರಮಗಳ ಬಗ್ಗೆ 2 ನಿಮಿಷ 56 ಸೆಕೆಂಡ್‌ಗಳ ವಿಡಿಯೋದಲ್ಲಿ ತಿಳಿಸಿದ್ದಾರೆ.

ಹೊಸದಿಲ್ಲಿ: ದೇಶದಾದ್ಯಂತ ನೀಟ್ ಪೇಪರ್‌ ಲೀಕ್‌ ವಿರುದ್ಧದ ಪ್ರತಿಭಟನೆಗಳು ಹಬ್ಬಿವೆ. ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೆಹಲಿಯ ಜಂತರ್‌ ಮಂತರ್‌ನಲ್ಲಿಯೂ 3 ದಿನಗಳಿಂದ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಹೊತ್ತಲ್ಲಿ ಗುರುವಾರ ನೀಟ್ ಅಕ್ರಮಗಳ ತನಿಖೆಗೆ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ತಡರಾತ್ರಿ ವಿಡಿಯೋ ಸಂದೇಶವನ್ನೂ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಶುಕ್ರವಾರವೇ ಸಚಿವ ಸಂಪುಟ ಸಭೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.


ವಿಡಿಯೋದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

‘ಸ್ನೇಹಿತರೇ, ಪ್ರಶ್ನೆಪತ್ರಿಕೆ ಸೋರಿಕೆಯು ಯಾವುದೇ ಸಾಮಾನ್ಯ ವಿಷಯವಲ್ಲ ಎಂಬುದು ನನಗೆ ತಿಳಿದಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಅದಕ್ಕಾಗಿಯೇ ಪೇಪರ್‌ ಲೀಕ್‌ ಘಟನೆ ನಡೆದ ತಕ್ಷಣ ಕಳೆದ ಎರಡುವರೆ ತಿಂಗಳುಗಳಲ್ಲಿ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ” ಎಂದಿದ್ದಾರೆ. ಮುಂದುವರಿದು…

ತಪ್ಪತಸ್ಥರನ್ನು ಜೈಲಿಗೆ ಹಾಕಲಾಗಿದೆ.

“ಪೇಪರ್ ಲೀಕ್ ಮಾಡಿದ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಲಾಗಿದೆ. ವಿದ್ಯಾರ್ಥಿಗಳ 1 ವರ್ಷ ವ್ಯರ್ಥವಾಗಬಾರದೆಂಬ ಕಾರಣಕ್ಕೆ ತಕ್ಷಣವೇ ಪರೀಕ್ಷೆ ಕೈಗೊಳ್ಳುವುದು ಅಗತ್ಯವಾಗಿತ್ತು. ಸರಕಾರದ ಎಲ್ಲಾ ಶಕ್ತಿ ಬಳಸಿ 22 ಲಕ್ಷ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯನ್ನು ಮಾಡಲಾಯಿತು ಎಂದು ಪ್ರಧಾನಿ ಹೇಳಿದ್ದಾರೆ. ಈಗ ಐದಾರು ದಿನಗಳ ಹಿಂದೆ ಜುಲೈ 21 ಕ್ಕೆ ಇದರ ಫಲಿತಾಂಶವೂ ಬಂದಿದೆ. ದೇಶದಾದ್ಯಂತ ವಿದ್ಯಾರ್ಥಿಗಳು ಉತ್ತೀರ್ಣವಾಗಿರುವ ಖುಷಿಯ ಸಂದೇಶಗಳೂ ಬಂದಿದೆ.” ಆದರೆ ನಾವು ಅಷ್ಟರಲ್ಲೇ ಸಂತೋಷಕಾಣುವುದಿಲ್ಲ. ಹೀಗಾಗಿ ನಾನು ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೆ. ಇಲಾಖೆಗಳು ತಡರಾತ್ರಿಯವರೆಗೆ ಶ್ರಮವಹಿಸಿ ನನಗೆ ಅನುಮೋದನೆ ನೀಡಿವೆ. ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಇದರ ಕುರಿತು ವಿವರವಾದ ಚರ್ಚೆ ನಡೆಯಲಿದ್ದು, ಸಂಪುಟ ಸದಸ್ಯರ ಸಲಹೆಗಳ ನಂತರ ಮಸೂದೆಗೆ ಅಂತಿಮ ರೂಪ ನೀಡಲಾಗುವುದು. ಹಾಗೂ ಸೋಮವಾರದಿಂದ ಸಂಸತ್ತಿನ ಎರಡನೇ ವಾರದ ಅಧಿವೇಶನ ಆರಂಭವಾಗಲಿದ್ದು, ಆದಷ್ಟು ಬೇಗ ಈ ಮಸೂದೆಯನ್ನು ಅಂಗೀಕರಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಹೇಳಿದ್ದಾರೆ.