ವಾಷಿಂಗ್ಟನ್: ಭಾರತ ಮೂಲದ ಸಂಜಾತೆ ನೀರಾ ತಂಡನ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದಾರೆ. ರಿಪಬ್ಲಿಕನ್ ಸೆನೆಟರ್ಗಳ ತೀವ್ರ ವಿರೋಧದಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮ ನಿರ್ದೇಶವನ್ನು ನೀರಾ ತಂಡನ್ ಹಿಂಪಡೆದಿದ್ದರು.
ತಂಡನ್ ಅವರಿಗೆ ಎರಡು ಹೊಣೆಗಾರಿಕೆ ನೀಡಲಾಗಿದೆ. ಮೊದಲನೆಯದು ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ಎರಡನೆಯದು ‘ಅಫೋರ್ಡಬಲ್ ಕೇರ್ ಆ್ಯಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ ದಾವೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸುವುದಾಗಿದೆ. ನೀರಾ ತಂಡನ್ ಸೋಮವಾರ ಶ್ವೇತ ಭವನ ಪ್ರವೇಶಿಸಲಿದ್ದಾರೆ.