ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿ ನೀಲಾವರ ಸುರೇಂದ್ರ ಅಡಿಗ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಇಂದು ಉಡುಪಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಈ ಬಾರಿ ಆಯ್ಕೆಯಾಗಿ ಪ್ರಥಮ ಆದ್ಯತೆಯಾಗಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಬಹುದಿನಗಳ ಬೇಡಿಕೆಯಾದ ಕನ್ನಡ ಭವನಕ್ಕೆ 2 ತಿಂಗಳಲ್ಲಿ ಸರ್ಕಾರದ ಅನುದಾನ ಲಭಿಸದಿದ್ದರೆ, ದಾನಿಗಳಿಂದ ಧನ ಸಂಗ್ರಹಿಸಿ ಗ್ರಂಥಾಲಯ, ಇ-ಗ್ರಂಥಾಲಯ ಸಹಿತ 3 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಭವನ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ನೀಲ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ನನ್ನ ಕಾರ್ಯಾವಧಿಯಲ್ಲಿ 1876 ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 25 ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, 4 ಜಿಲ್ಲಾ ಮಟ್ಟದ ಸಮ್ಮೇಳನ ನಡೆದಿದೆ. ದತ್ತಿನಿಧಿ ಸಂಖ್ಯೆ 6ರಿಂದ 13ಕ್ಕೆ ಏರಿಕೆಯಾಗಿದೆ. ಈ ಮೂಲಕ 3.55 ಲಕ್ಷ ರೂ. ಜಮೆಯಾಗಿದೆ. 117 ಹಿರಿಯರನ್ನು ಅವರವರ ಮನೆಗೆ ಹೋಗಿ ಅಭಿನಂದಿಸಲಾಗಿದೆ. ಸಾಹಿತ್ಯ ಪರಿಷತ್ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ ಎಂದರು.

ಕಸಾಪ ಸದಸ್ಯರಾದ ಶಾಂತರಾಜ ಐತಾಳ್, ಉಪೇಂದ್ರ ಸೋಮಯಾಜಿ, ನಿತ್ಯಾನಂದ ಪೈ, ಸುಬ್ರಹ್ಮಣ್ಯ ಶೆಟ್ಟಿ, ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ದೇವದಾಸ ಹೆಬ್ಬಾರ್, ಸಾಹಿತಿ ಕು.ಗೋ. ಉಪಸ್ಥಿತರಿದ್ದರು.