ಹದಿಹರೆಯದ ದೈಹಿಕ-ಮಾನಸಿಕ ಬದಲಾವಣೆಗಳ ಬಗ್ಗೆ ಕೀಳರಿಮೆ ಸಲ್ಲದು: ಡಾ. ಅಪೇಕ್ಷಾ ಡಿ ರಾವ್

ಉಡುಪಿ: ಹದಿಹರೆಯ ಒಬ್ಬ ವ್ಯಕ್ತಿಯ ಜೀವನದ ಸಂಕ್ರಮಣ ಕಾಲ. ಈ ಸಂದರ್ಭದಲ್ಲಿ ಜೀವಜಗತ್ತಿನ ಎಲ್ಲ ಜೀವಿಗಳಲ್ಲಿ ಆಗುವಂತೆ ಮನುಷ್ಯನಲ್ಲಿಯೂ ಕೂಡ ಪ್ರಾಕೃತಿಕ ಬದಲಾವಣೆಗಳು ಆಗುವುದು ಸಹಜ. ಈ ವಿಷಯದಲ್ಲಿ ಕೀಳರಿಮೆ, ಸಂಕೋಚ, ಮುಜುಗರಪಡುವ ಅಗತ್ಯ ಇಲ್ಲ. ಈ ಬದಲಾವಣೆಯನ್ನು ಸಹಜ ಎಂಬಂತೆ ತಿಳಿದು ದೈಹಿಕ, ಮಾನಸಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಗಮನ ಹರಿಸಿದರೆ ಸಾಕು ಎಂದು ಡಾ| ಅಪೇಕ್ಷಾ ಡಿ ರಾವ್ ಅಭಿಪ್ರಾಯಪಟ್ಟರು.

ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಹದಿಹರೆಯದ ಸಮಸ್ಯೆಗಳು ಎಂಬ ಕುರಿತು ಉಡುಪಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆದ ಮಾಹಿತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಎಮ್ ರಾವ್ ಮಾತನಾಡಿ ವಿದ್ಯಾರ್ಥಿನಿಯರು ಭಯಪಡದೆ ಹದಿಹರೆಯದ ಸಮಸ್ಯೆಗಳನ್ನು ಎದುರಿಸಬೇಕೆಂದು ತಿಳಿ ಹೇಳಿದರು.

ಸಂಸ್ಥೆಯಲ್ಲಿ ದೀರ್ಘಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ನಾಯಕ್ ಇವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಶೈಲಿ ನಾಯಕ್, ನಿಕಟಪೂರ್ವ ಅಧ್ಯಕ್ಷ ಉಮೇಶ್ ನಾಯಕ್, ಕಾರ್ಯಕ್ರಮ ಅಧಿಕಾರಿ ವಾದಿರಾಜ ರಾವ್ , ಮುಖ್ಯ ಶಿಕ್ಷಕರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕರೂ ಪಾಲ್ಗೊಂಡಿದ್ದರು.

ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿ ವಂದಿಸಿದರು.