ಭೂಕಂಪ ಸಂತ್ರಸ್ತ ಟರ್ಕಿಗೆ ಭಾರತದ ಸಹಾಯಹಸ್ತ: ಶ್ವಾನದಳದೊಂದಿಗೆ ಎನ್.ಡಿ. ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯ

ಸೈಪ್ರಸ್: ಟರ್ಕಿಯಲ್ಲಿ ನಿನ್ನೆ 7.8, 7.6 ಮತ್ತು 6.0 ತೀವ್ರತೆಯ ಸತತ ಮೂರು ವಿನಾಶಕಾರಿ ಭೂಕಂಪಗಳಿಂದ 3,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಕಟ್ಟಡಗಳು ತರಗೆಲೆಗಳಂತೆ ಉದುರಿದ್ದು, ಈ ಕಟ್ಟಡಗಳ ಅವಶೇಷಗಳಡಿಯಲ್ಲಿ ಅದೆಷ್ಟು ಜನ ರಕ್ಷಣೆಗಾಗಿ ಕಾಯುತ್ತಿದ್ದಾರೆ ಎನ್ನುವ ಲೆಕ್ಕವೇ ಇಲ್ಲ.

Image

ಇದೀಗ, ವಿಶೇಷ ತರಬೇತಿ ಪಡೆದ ಶ್ವಾನದಳದೊಂದಿಗೆ ಭಾರತದ ಎನ್.ಡಿ.ಆರ್.ಎಫ್ ಸಿಬ್ಬಂದಿಗಳ ತಂಡವು ಅಗತ್ಯ ಸಲಕರಣೆಗಳೊಂದಿಗೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಟರ್ಕಿಗೆ ತೆರಳಿದೆ. ಟರ್ಕಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಿಂದ ತಂಡವು ಹೊರಟಿದೆ.

ಭಾರತದಿಂದ ಟರ್ಕಿಗೆ ಮೊದಲ ಎನ್‌ಡಿಆರ್‌ಎಫ್ ತಂಡವನ್ನು ಮುನ್ನಡೆಸುತ್ತಿರುವ ಎನ್‌ಡಿಆರ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ದೀಪಕ್ ತಲ್ವಾರ್ ಎಎನ್‌ಐ ಜೊತೆ ಮಾತನಾಡುತ್ತಾ, ಈ ತಂಡವು 47 ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಮೂವರು ಹಿರಿಯ ಅಧಿಕಾರಿಗಳನ್ನು ಒಳಗೊಂಡಿದ್ದು, ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಚೇತರಿಕೆ ಮತ್ತು ಪ್ರತಿಕ್ರಿಯೆ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದಿದ್ದಾರೆ.

ನಾವು ಎರಡು ತಂಡಗಳಿಗೆ ಆದೇಶಗಳನ್ನು ಸ್ವೀಕರಿಸಿದ್ದೇವೆ. ಮೊದಲ ತಂಡ ಶೀಘ್ರದಲ್ಲೇ ತೆರಳಲಿದೆ ಮತ್ತು ಎರಡನೇ ತಂಡ ಬೆಳಿಗ್ಗೆ ಹೊರಡಲಿದೆ. ನಾವು ವಿಪತ್ತು ಪ್ರತಿಕ್ರಿಯೆಗೆ ಹೋಗುತ್ತಿದ್ದೇವೆ ಮತ್ತು ಅದರ ನಂತರ, ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮಾನವೀಯ ನೆರವು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Image

ಎರಡು ತಂಡಗಳ ಸುಮಾರು 101 ಎನ್‌ಡಿಆರ್‌ಎಫ್ ಸಿಬ್ಬಂದಿ, ಗಾಜಿಯಾಬಾದ್‌ನ ಎನ್‌ಡಿಆರ್‌ಎಫ್‌ನ ಎಂಟು ಬೆಟಾಲಿಯನ್‌ನ ಒಂದು ತಂಡ ಮತ್ತು ಕೋಲ್ಕತ್ತಾದಿಂದ ಎನ್‌ಡಿಆರ್‌ಎಫ್‌ನ ಎರಡನೇ ಬೆಟಾಲಿಯನ್‌ನಿಂದ ಇನ್ನೊಂದು ತಂಡ ಈ ಕಾರ್ಯಾಚರಣೆಗೆ ತೆರಳಲಿದ್ದಾರೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳ ಕ್ರಮವಾಗಿ ಭಾರತ ಸರ್ಕಾರವು ಎನ್.ಡಿ.ಆರ್.ಎಫ್ ನ ಎರಡು ತಂಡಗಳನ್ನು ಟರ್ಕಿಗೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

https://twitter.com/i/status/1622759094519209984