ಉತ್ತರಕಾಶಿ/ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿದು 16 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದೆ. ಸುರಂಗದ ಒಳಗೆ 41 ಜನ ಕಾರ್ಮಿಕರಿದ್ದಾರೆ. ಹೊರಗೆ ಹಲವಾರು ಜನರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಜನರ ಸುರಕ್ಷತೆ ಮತ್ತು ಭದ್ರತೆ ಮುಖ್ಯ. ನಮಗೆ ಯಾವುದೇ ಆತುರವಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಸುಮಾರು 3-4 ನಾಲ್ಕು ಗಂಟೆಗಳು ಬೇಕಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ, ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ ತಿಳಿಸಿದ್ದಾರೆ.
ಸದ್ಯದ ಮಾಹಿತಿ ನೀಡಿದ ಎನ್ಡಿಎಂಎ: ರ್ಯಾಟ್ ರಂಧ್ರ ಗಣಿಗಾರಿಕೆ ತಜ್ಞರು ಕೈಯಾರೆ ಸುರಂಗ ಕೊರೆಯುವ ಕೊನೆಯ ಹಂತವನ್ನು ತಲುಪಿದ್ದಾರೆ. ಅವಶೇಷಗಳ ಸವಾಲು ಮೀರಿ ಇದುವರೆಗೆ 58 ಮೀಟರ್ ಕೊರೆದಿದ್ದು, ಇನ್ನೂ ಎರಡು ಮೀಟರ್ ಸಾಗಬೇಕಾಗಿದೆ. ಈ ಬಗ್ಗೆ ನವದೆಹಲಿಯಲ್ಲಿ ಸಂಜೆ 4 ಗಂಟೆಗೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ಸದಸ್ಯ, ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್, ರಕ್ಷಣಾ ತಂಡದ ಕಾರ್ಮಿಕರು ಮಹತ್ವದ ಹಂತಕ್ಕೆ ತಲುಪಿದ್ದಾರೆ. ಸಿಲುಕಿರುವ ಕಾರ್ಮಿಕರು ಯಂತ್ರಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಚಾರ್ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಿ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದು, ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಹಲವು ರೀತಿಯ ಕಾರ್ಯಾಚರಣೆಗಳ ನಂತರ ಮಾನವ ಸಾಮರ್ಥ್ಯದಿಂದಲೇ 60 ಮೀಟರ್ ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದೆ.
ಸಿಎಂ ಧಾಮಿ ‘ಎಕ್ಸ್’ ಪೋಸ್ಟ್: ಇದಕ್ಕೂ ಮುನ್ನ ಮಧ್ಯಾಹ್ನ 1.30ರ ಸುಮಾರಿಗೆ ದುರಂತದ ಸ್ಥಳದಲ್ಲಿ ಮಾತನಾಡಿದ್ದ, ರಾಜ್ಯ ಸರ್ಕಾರದ ಮಾಹಿತಿ ಇಲಾಖೆಯ ಮುಖ್ಯಸ್ಥ ಬನ್ಸಿ ಧರ್ ತಿವಾರಿ ಕೊರೆಯುವ ಕಾರ್ಯ ಮುಗಿದಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಇದಾದ ಒಂದು ಗಂಟೆಯ ನಂತರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೊರೆಯಲಾದ ಪ್ಯಾಸೇಜ್ಗೆ ಪೈಪ್ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಎಲ್ಲ ಸಹೋದರ ಕಾರ್ಮಿಕರನ್ನು ಹೊರತರಲಾಗುವುದು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಮತ್ತೊಂದೆಡೆ, ಇದಕ್ಕೂ ಮೊದಲು ಎನ್ಎಚ್ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹಮೂದ್ ಅಹ್ಮದ್, ಸುರಂಗ ಕೊರೆಯುವ ಕಾರ್ಯ ಮುಗಿದಿದೆ ಎಂದು ತಕ್ಷಣ ಖಚಿತಪಡಿಸಿರಲಿಲ್ಲ. ಪೈಪ್ನ ಕೊನೆಯ ಭಾಗವನ್ನು ತಳ್ಳಲಾಗುತ್ತಿದೆ ಎಂದು ಮಾಧ್ಯಮದವರಿಗೆ ಹೇಳಿದ್ದರು. ಎಲ್ ಅಂಡ್ ಟಿ ತಂಡದ ತಜ್ಞ ಕ್ರಿಸ್ ಕೂಪರ್, ಸಂಜೆ 5 ಗಂಟೆಯೊಳಗೆ ಕಾರ್ಮಿಕರು ಹೊರಬರುವ ಸಾಧ್ಯತೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಸುರಂಗದೊಳಗೆ ಆರೋಗ್ಯ ಕೇಂದ್ರದ ವ್ಯವಸ್ಥೆ: ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿರುವುದರಿಂದ ಸುರಂಗದ ಹೊರಗೆ ಅನೇಕ ಸನ್ನದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಮಿಕರನ್ನು ಸ್ಥಳಾಂತರಿಸಿದ ನಂತರ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸುರಂಗದೊಳಗೆ ಎಂಟು ಬೆಡ್ಗಳ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಅಲ್ಲದೇ, ಸ್ಥಳದಲ್ಲಿ ಪ್ರಾಥಮಿಕ ತಪಾಸಣೆಯ ನಂತರ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ಗಳು ಸಾಲುಗಟ್ಟಿ ನಿಲ್ಲಿಸಲಾಗಿದೆ. ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾರ್ಮಿಕರನ್ನು ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ. ಆಂಬ್ಯುಲೆನ್ಸ್ಗಳ ಸಂಚಾರವನ್ನು ಸುಲಭಗೊಳಿಸಲು ಮಣ್ಣಿನ ರಸ್ತೆಯ ಅಗಲೀಕರಣ ಮಾಡಲಾಗಿದೆ.ಸುರಂಗದ ಅವಶೇಷಗಳನ್ನು ಕತ್ತರಿಸಲಾಗಿದ್ದು, ಇಡೀ ದಿನ ಕಾರ್ಯ ನಡೆಯುತ್ತಿದೆ. ರ್ಯಾಟ್ ರಂಧ್ರ ಗಣಿಗಾರಿಕೆ ಪರಿಣಿತರು, ತಜ್ಞರು ಮತ್ತು ಸೇನೆ ಎಂಜಿನಿಯರ್ಗಳು, 58 ಮೀಟರ್ ಒಳಗೆ ತಲುಪಿದ್ದಾರೆ. ಅಗರ್ ಯಂತ್ರದ ಸಹಾಯದಿಂದ ಪೈಪ್ ಒಳ ತಳ್ಳಲಾಗಿದೆ. ಒಬ್ಬ ವ್ಯಕ್ತಿಯನ್ನು ಹೊರತೆಗೆಯಲು ಇದು ಸುಮಾರು ಮೂರರಿಂದ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಎಲ್ಲ 41 ಕಾರ್ಮಿಕರನ್ನು ರಕ್ಷಿಸಲು ಸುಮಾರು ಮೂರರಿಂದ ನಾಲ್ಕು ಗಂಟೆಗಳು ಬೇಕಾಗುತ್ತದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಎಲ್ಲ ಭದ್ರತೆ ಮತ್ತು ಸುರಕ್ಷತೆ ಮುಖ್ಯ. ಇದಕ್ಕೆ ಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.