ನವದೆಹಲಿ: ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಅಭ್ಯರ್ಥಿ ಜಗದೀಪ್ ಧನಕರ್ ಅವರು ಭಾರತದ 14 ನೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಧನಕರ್ 528 ಮತಗಳನ್ನು ಪಡೆದು ವಿರೋಧ ಪಕ್ಷದ ಅಭ್ಯರ್ಥಿ, 182 ಮತ ಪಡೆದ ಶ್ರೀಮತಿ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿದರು. ನಿನ್ನೆ ನಡೆದ ಮತದಾನದಲ್ಲಿ ಶೇ.72.8 ರಷ್ಟು ಮಾನ್ಯವಾದ ಮತಗಳೊಂದಿಗೆ ಧನಕರ್ ಅವರ ಗೆಲುವು ಕಳೆದ ಆರು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಪಡೆದ ಅತ್ಯಾಧಿಕ ಗೆಲುವಿನ ಅಂತರವಾಗಿದೆ.
ಮೂಲತಃ ಲೋಕದಳ ಪಕ್ಷ ಆ ಬಳಿಕ ಕಾಂಗ್ರೆಸ್ ನಲ್ಲಿದ್ದು, ನಂತರ ಬಿಜೆಪಿ ಪಾಳಯಕ್ಕೆ ಸೇರಿದ ಧನಕರ್ ಅವರು ಮೊದಲ ಸಂಘಪರಿವಾರೇತರ ರಾಜಕಾರಣಿ. ಸುಮಾರು 73% ಮತಗಳನ್ನು ಗಳಿಸಿದ ಅವರು 346 ಮತಗಳ ಗೆಲುವಿನ ಅಂತರವನ್ನು ಪಡೆದರು, ಇದು 1997 ರ ಬಳಿಕ ಉಪರಾಷ್ಟ್ರಪತಿಯೊಬ್ಬರು ಪಡೆದ ಅತ್ಯಾಧಿಕ ಅಂತರದ ಗೆಲುವಾಗಿದೆ. ಈ ಹಿಂದೆ 1992 ರಲ್ಲಿ ಕೆ.ಆರ್ ನಾರಾಯಣನ್ 701 ರಲ್ಲಿ 700 ಮತಗಳನ್ನು ಪಡೆದು ದಾಖಲೆ ಮಾಡಿದ್ದರು.
ಧನಕರ್ ಅವರು ಇತರೆ ಹಿಂದುಳಿದ ವರ್ಗ(ಜಾಟ್) ಕ್ಕೆ ಸೇರಿದ ಮೊಟ್ಟಮೊದಲ ಉಪರಾಷ್ಟ್ರಪತಿ. ರಾಜಸ್ಥಾನದ ಝುನ್ ಝುನ್ ನಲ್ಲಿ ಜನಿಸಿದ ಧನಕರ್, ಫಿಸಿಕ್ಸ್ ನಲ್ಲಿ ಪದವಿ ಪಡೆದು ಎಲ್.ಎಲ್.ಬಿ ವಿದ್ಯಾಭ್ಯಾಸ ಪೂರೈಸಿ ಸುಮಾರು ನಲ್ವತ್ತು ವರ್ಷಗಳ ಕಾಲ ಹೈಕೋಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಮುಗಿದ ಒಂದು ದಿನದ ಬಳಿಕ ಧನಕರ್ ಅವರು ಗುರುವಾರ (ಆಗಸ್ಟ್ 11) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.