ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು NCERT ಸಮಿತಿ ಶಿಫಾರಸು

ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಮಿತಿಯು ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ ಸಾರ್ವತ್ರಿಕವಾಗಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು ಪ್ರಸ್ತಾಪಿಸಿದೆ. ಇದು ಕೇವಲ ಶಿಫಾರಸು ಮಾತ್ರ ಮತ್ತು ಇದು ಇನ್ನೂ ಅನುಮೋದನೆ ಪಡೆಯಬೇಕಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ನಾವು ಸದ್ಯಕ್ಕೆ ಏನನ್ನೂ ಒಪ್ಪಿಕೊಂಡಿಲ್ಲ. ಸಮಿತಿಯು ತಮ್ಮ ವರದಿಯನ್ನು ಕಳುಹಿಸಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ತಿಳಿಸಿದ್ದಾರೆ. ಹಲವು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಇಂಡಿಯಾ ಮತ್ತು ಭಾರತ ಹೆಸರಿನ ನಡುವೆ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಮಧ್ಯೆ ವಾಕ್ಸಮರ ನಡೆಯುತ್ತಿದೆ.

ಭಾರತದ ಅಧಿಕೃತ ಕಾರ್ಯಕ್ರಮಗಳಲ್ಲಿ, G20 ಸಮ್ಮೇಳನ, ಆಹ್ವಾನ ಪತ್ರಿಕೆಗಳಲ್ಲಿ ಇಂಡಿಯಾ ಬದಲಿಗೆ ‘ಭಾರತ’ ಹೆಸರನ್ನು ಉಲ್ಲೇಖಿಸುತ್ತಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿತ್ತು.

ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ‘ಭಾರತ’ ಪದದ ಅರ್ಥವು ಸಂವಿಧಾನದಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.

ಇಂಡಿಯಾ, ಅದು ಭಾರತ, ಎಂದು ಸಂವಿಧಾನದಲ್ಲಿದೆ. ದಯವಿಟ್ಟು, ಅದನ್ನು ಓದಲು ನಾನು ಪ್ರತಿಯೊಬ್ಬರನ್ನು ಆಹ್ವಾನಿಸುತ್ತೇನೆ ಎಂದು ಜೈಶಂಕರ್ ಸುದ್ದಿ ಸಂಸ್ಥೆ ಎ.ಎನ್.ಐಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಹೆಸರನ್ನು ಬದಲಾಯಿಸುವ ಕೇಂದ್ರದ ಕ್ರಮದ ಬಗ್ಗೆ ಮಾತನಾಡುತ್ತಾ, ಈ ಕ್ರಮವು ತುಂಬಾ ಸ್ಪಷ್ಟವಾಗಿತ್ತು. ಸರ್ಕಾರ ಹೆಸರು ಬದಲಿಸುವ ಹುನ್ನಾರದಲ್ಲಿದೆ. ಯಾವುದೇ ಆಟ ಬದಲಾಯಿಸುವ ಯೋಜನೆಗಳು ನಡೆಯುತ್ತಿಲ್ಲ, ಕೇವಲ ಹೆಸರು ಬದಲಾಯಿಸುವ ಯೋಜನೆಗಳು ನಡೆಯುತ್ತಿವೆ. ಇಂಡಿಯಾ ಎಂಬ ಹೆಸರಿನ ಮೇಲೆ ಹಠಾತ್ ದ್ವೇಷ ಏಕೆ? ಅವರು ಒಂಬತ್ತು ವರ್ಷಗಳ ಕಾಲ ಏಕೆ ಕಾಯುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.