ಉಡುಪಿ, ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಮೂರು ವರ್ಷಗಳ ಅವಧಿಗೆ ರಾಷ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದ್ದು, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ನಿರಂತರ ಗುಣಮಟ್ಟ ಸುಧಾರಣೆಗೆ ಅದರ ಬದ್ಧತೆಯನ್ನು ಗುರುತಿಸಿದೆ.
ಭಾರತ ಸರ್ಕಾರದ ಅಡಿಯಲ್ಲಿ ರಾಷ್ರೀಯ ಮಾನ್ಯತಾ ಮಂಡಳಿ (NBA) ಅತ್ಯುನ್ನತ ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನೀಡುವ ಪದವಿಗಳ ಗುಣಾತ್ಮಕ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ. 2025-26 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವ ಈ ಪ್ರತಿಷ್ಠಿತ ಮಾನ್ಯತೆಯನ್ನು NBA ತಜ್ಞರ ತಂಡವು ನಡೆಸಿದ ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ ನೀಡಲಾಯಿತು.
ಇದು ಮೆಕ್ಯಾನಿಕಲ್ ವಿಭಾಗದ ಶೈಕ್ಷಣಿಕ ಪ್ರಕ್ರಿಯೆಗಳು, ಅಧ್ಯಾಪಕರ ಅರ್ಹತೆಗಳು,ಮೂಲಸೌಕರ್ಯ, ವಿದ್ಯಾರ್ಥಿಗಳ ಫಲಿತಾಂಶಗಳು, ಸಂಶೋಧನಾ ಚಟುವಟಿಕೆಗಳು ಮತ್ತು ಉದ್ಯಮ ಸಹಯೋಗಗಳನ್ನು ಆಧರಿಸಿದೆ.
ಈ ಮಾನ್ಯತೆಯಿಂದ ಪದವೀಧರರಿಗೆ ಸುಧಾರಿತ ಉದ್ಯೋಗಾವಕಾಶಗಳು, ಸರ್ಕಾರದ ಸಂಶೋಧನಾ ನಿಧಿಗೆ ಅರ್ಹತೆ ಮತ್ತು ಅಂತರಾಷ್ರೀಯ ಸಹಯೋಗಕ್ಕೆ ಹೆಚ್ಚಿನ ಅವಕಾಶಗಳು ಸೇರಿದಂತೆ NBA ಮಾನ್ಯತೆ ಮೆಕ್ಯಾನಿಕಲ್ ವಿಭಾಗಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ.

ಸಂಸ್ಥೆಯ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಪ್ರೊ. ಡಾ.ರಾಧಾಕೃಷ್ಣ ಎಸ್ ಐತಾಳ್ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಡಾ.ತಿರುಮಲೇಶ್ವರ ಭಟ್ ಅವರು ಈ ಉತ್ಕೃಷ್ಟ ಸಾಧನೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.












