ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಹಾಗೂ ಇಂಧನ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಇಂಧನ ಮಾರಾಟ ಸಂಸ್ಥೆ ‘ನಯಾರಾ ಎನರ್ಜಿ’ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿದೆ.
ಶನಿವಾರದಿಂದ ಜಾರಿಗೆ ಬರುವಂತೆ ನಯಾರಾ ಎನರ್ಜಿ ತನ್ನ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ₹3 ಹೆಚ್ಚಿಸಿದೆ. ದೇಶಾದ್ಯಂತ ಕಂಪನಿಯ 7,000ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.
ಅಂತರರಾಷ್ಟ್ರೀಯ ಇಂಧನ ಬೆಲೆಗಳ ನಿರಂತರ ಏರಿಕೆಯಿಂದಾಗಿ ಚಿಲ್ಲರೆ ಮಾರಾಟ ದರ ಮತ್ತು ಇಂಧನ ಖರೀದಿ ವೆಚ್ಚದ ನಡುವಿನ ಅಂತರ ಹೆಚ್ಚಾಗಿದ್ದು, ಇದನ್ನು ಸರಿದೂಗಿಸುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ವರ್ಷ ನಯಾರಾ ಎನರ್ಜಿ ಕೈಗೊಂಡಿರುವ ಎರಡನೇ ಬೆಲೆ ಪರಿಷ್ಕರಣೆ ಇದಾಗಿದೆ. ಇದಕ್ಕೂ ಮುನ್ನ ಮಾರ್ಚ್ನಲ್ಲಿ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇದೇ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು.
ಆದರೆ, ಬಳಿಕ ಕಚ್ಚಾ ತೈಲದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಜುಲೈನಲ್ಲಿ ಈ ಬೆಲೆ ಏರಿಕೆಯನ್ನು ಕಂಪನಿ ಹಿಂಪಡೆದಿತ್ತು. ಇದೀಗ ಜಾಗತಿಕ ಇಂಧನ ಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ದರ ಹೆಚ್ಚಿಸಲಾಗಿದೆ.















