ಮಂಗಳೂರು: ಮೈಸೂರು ದಸರಾ ಬಳಿಕ ಕರಾವಳಿಯಲ್ಲಿ ಹೆಚ್ಚಿನ ಜನಾಕರ್ಷಣೆ ಹೊಂದಿರುವ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 11ರಿಂದ ಆರಂಭವಾಗಲಿದೆ.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 22ರವರೆಗೆ ಮಂಗಳೂರು ದಸರಾ ಹಾಗೂ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಕೇಂದ್ರದ ಮಾಜಿ ವಿತ್ತ ಸಚಿವ ಹಾಗೂ ಕ್ಷೇತ್ರದ ಜೀರ್ಣೋದ್ಧಾರದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಉತ್ಸವದ ಸಿದ್ಧತೆಗಳು ನಡೆಯುತ್ತಿವೆ.
ಅಕ್ಟೋಬರ್ 11ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ ಸಚಿವರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಭವ್ಯ ದರ್ಬಾರ್ ಮಂಟಪಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಅರಮನೆ ಶೈಲಿಯಲ್ಲಿ ಭವ್ಯ ದರ್ಬಾರ್ ಮಂಟಪ ನಿರ್ಮಿಸಲಾಗಿದೆ. ಇಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ.
ಉತ್ಸವದ ಸಂದರ್ಭದಲ್ಲಿ ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದೆ.
ಪ್ರತಿದಿನ ಚಂಡಿಕಾಹೋಮಅಕ್ಟೋಬರ್ 12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ಚಂಡಿಕಾಹೋಮ ನೆರವೇರಲಿದೆ. ಅಕ್ಟೋಬರ್ 17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಆಯೋಜಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಸಾರ್ವಜನಿಕರು ಕೂಡ ಹೋಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರು ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ಸಾಧಕ ಮಹಿಳೆಯರಿಗೆ ಪ್ರತಿದಿನ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ವಿವಿಧ ಸ್ಪರ್ಧೆಗಳ ಆಯೋಜನೆಅಕ್ಟೋಬರ್ 12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 13ರಂದು ಸಂಜೆ 7.30ರಿಂದ ‘ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆಯ ಎರಡನೇ ಆವೃತ್ತಿ ಆಯೋಜಿಸಲಾಗಿದೆ.
ಅಕ್ಟೋಬರ್ 15ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ.
ಅಕ್ಟೋಬರ್ 16ರಂದು ‘ಮುದ್ದು ಶಾರದೆ’ ಸ್ಪರ್ಧೆ ಆಯೋಜಿಸಲಾಗಿದೆ. ಅಕ್ಟೋಬರ್ 18ರಂದು ದಸರಾ ಮ್ಯಾರಥಾನ್ನ ನಾಲ್ಕನೇ ಆವೃತ್ತಿ ಹಾಗೂ ‘ಕಿನ್ನಿಪಿಲಿ’ ಸೀಸನ್-2 ನಡೆಯಲಿದೆ.
ಅ.19ರಂದು ಮಹಿಳಾ ದಸರಾಅಕ್ಟೋಬರ್ 19ರಂದು ಮಹಿಳಾ ದಸರಾ ಆಯೋಜಿಸಲಾಗಿದ್ದು, ಭರತನಾಟ್ಯ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ ಹಾಗೂ ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ ದಾಂಡಿಯಾ ನೃತ್ಯ ಪ್ರದರ್ಶನ ನಡೆಯಲಿದೆ.
ಅಕ್ಟೋಬರ್ 20ರಂದು ‘ದಸರಾ ರಂಗಾಂತರಂಗ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳು ಜರುಗಲಿವೆ.
ಅಕ್ಟೋಬರ್ 20ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಶಾರದಾ ಮಾತೆಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಲಾಗುತ್ತದೆ. ಪೋಷಕರು ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಅ.21ರಂದು ಭವ್ಯ ಶೋಭಾಯಾತ್ರೆಮಂಗಳೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಭವ್ಯ ಶೋಭಾಯಾತ್ರೆ ಅಕ್ಟೋಬರ್ 21ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ. ವಿವಿಧ ದೇವರ ಮೂರ್ತಿಗಳು, ಸಾಂಸ್ಕೃತಿಕ ತಂಡಗಳು ಹಾಗೂ ಕಲಾಪ್ರದರ್ಶನಗಳೊಂದಿಗೆ ಸಾಗುವ ಮೆರವಣಿಗೆ ಮಂಗಳೂರು ದಸರಾ ಮಹೋತ್ಸವದ ವೈಭವವನ್ನು ಸಾರಲಿದೆ.
ಧಾರ್ಮಿಕ ಕಾರ್ಯಕ್ರಮಗಳು, ಹೋಮ, ಸಾಂಸ್ಕೃತಿಕ ಪ್ರದರ್ಶನಗಳು, ಮಕ್ಕಳ ಹಾಗೂ ಮಹಿಳೆಯರ ಸ್ಪರ್ಧೆಗಳು ಮತ್ತು ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ.















