ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 80-90 ರು.ಗೆ ತಲುಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧಿಸಲಾಗಿದೆ ಎಂದು ಡೈರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆಯಲ್ಲಿ ತಿಳಿಸಿದೆ.
ಈರುಳ್ಳಿ ಬೆಳೆಯುವಂಥ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ನೆರೆ ಸಮಸ್ಯೆ ಆಗಿ, ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದ್ದರಿಂದ ಈ ಸ್ಥಿತಿ ಏರ್ಪಟ್ಟಿತು ಎನ್ನಲಾಗಿದೆ. ದೇಶದಲ್ಲಿ ಈರುಳ್ಳಿ ಪೂರೈಕೆ ಸುಗಮವಾಗುವವರೆಗೂ ವಿದೇಶಗಳಿಗೆ ಈರುಳ್ಳಿ ರಫ್ತಿಗೆ ನಿಷೇಧ ಹೇರಲಾಗುತ್ತಿದೆ. ಜೊತೆಗೆ ಚಿಲ್ಲರೆ ವ್ಯಾಪಾರಿಗಳಿಗೆ ಗರಿಷ್ಠ 100 ಕ್ವಿಂಟಾಲ್ ಮತ್ತು ಸಗಟು ವ್ಯಾಪಾರಿಗಳಿಗೆ ಗರಿಷ್ಠ 500 ಕ್ವಿಂಟಾಲ್ ಮಾತ್ರವೇ ಈರುಳ್ಳಿ ದಾಸ್ತಾನು ಮಾಡಲು ಅವಕಾಶ ನೀಡಲಾಗುತ್ತಿದೆ. ಈ ನಿಯಮ ಮೀರಿದಲ್ಲಿ ಅಂಥ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.