ನವದೆಹಲಿ: ದೆಹಲಿಯಲ್ಲಿ ಈರುಳ್ಳಿ ಬೆಲೆ 70 ರೂ. ರಿಂದ 80 ರೂ. ವರೆಗೆ ತಲುಪಿದ್ದು, ಕೇಂದ್ರ ಸರ್ಕಾರದ ಬೆಲೆ ನಿಯಂತ್ರಿಸಲು ಮುಂದಾಗಿದೆ.
ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ದೆಹಲಿಯಲ್ಲಿ ಕಳೆದ ವಾರ ಕೆ.ಜಿಗೆ 57 ರೂ. ಇತ್ತು. ಈ ವಾರ 70–80 ರೂ. ಕ್ಕೆ ಏರಿದೆ. 2-3 ದಿನಗಳಲ್ಲಿ ಬೆಲೆಯಲ್ಲಿ ಸ್ಥಿರತೆ ಮೂಡದೇ ಇದ್ದರೆ ಸರ್ಕಾರ ದಾಸ್ತಾನು ಮಿತಿ ಹೇರಲಿದೆ.
ಈರುಳ್ಳಿ ಪೂರೈಕೆ ಹೆಚ್ಚಿಸುವ ಮೂಲಕ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರದ ಬಳಿ ರೂ. 56 ಸಾವಿರ ಟನ್‌ಗಳಷ್ಟು ಹೆಚ್ಚುವರಿ ದಾಸ್ತಾನು ಇದ್ದು, ಇದುವರೆಗೆ 16 ಸಾವಿರ ಟನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಈರುಳ್ಳಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.