ಪರಿಸರ ಉಳಿಸುವ ಕೆಲಸವಾಗಲಿ: ದಿನಕರ ಬಾಬು

ಉಡುಪಿ, ಜೂನ್ 27: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಕೆರೆ ಕಟ್ಟೆಗಳು, ಮರಗಳನ್ನು ಬೆಳೆಸಿದ್ದರೀತಿ ಇಂದಿಗೂ ಮಾದರಿಯಾಗಿದೆ. ಅವರು ನಗರ ನಿರ್ಮಿಸಲು ಹಾಕಿಕೊಂಡಿದ್ದ ಯೋಜನೆಗಳನ್ನು ಅಳವಡಿಸಿ ಇಂದಿನ ದಿನಗಳಲ್ಲಿ ಅನುಪ್ಠಾನಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್‍ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘ(ರಿ), ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿ ನಡೆದ ನಾಡ ಪ್ರಭುಕೆಂಪೇ ಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡ ನಗರ ನಿರ್ಮಾಣದ ಯೋಜನೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ ನಾಡಿಗೆ ಮಾದರಿ, ಜಿಲ್ಲೆಯಲ್ಲಿ ತುಂಬಾ ನೀರಿನ ಸಮಸ್ಯೆಗಳು ಕಂಡು ಬಂದಿದೆ. ಸರಕಾರ ಸಹಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳು ಜೊತೆಗೂಡಿ ಹೂಳೆತ್ತುವ ಕಾರ್ಯ ಮಾಡಿಪರಿಸರ ಉಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ತಾಲೂಕು ಪಂಚಾಯತ್‍ಅಧ್ಯಕ್ಷೆ ನಳಿನಿ ಪ್ರದೀಪ್‍ರಾವ್ ಮಾತನಾಡಿ, ಕೆಂಪೇಗೌಡರು ಸಮಾಜಕ್ಕೆಆದರ್ಶ ಪ್ರಾಯರಾಗಿದ್ದವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ದೇಶದ ಪರಂಪರೆ, ಸಂಸ್ಕೃತಿ ಉಳಿಸುವ ಕೆಲಸ ಮಾಡಿದ, ನಾಡಿಗಾಗಿ ದುಡಿದವರ ಕುರಿತು ತಿಳಿದುಕೊಂಡು ದೇಶ ಪ್ರೇಮ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿ, ನಾಡಿಗಾಗಿ ಅಪಾರ ಸೇವೆ ಸಲ್ಲಿಸಿ, 9ಕೋಟೆಗಳನ್ನು ಕಟ್ಟಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಮ್ಮ ಬದುಕಿನಲ್ಲಿ ಕೆಂಪೇಗೌಡರ ಆದರ್ಶಗಳನ್ನು, ಒಳ್ಳೆಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.
ಇನ್ಸ್‍ಪೆಕ್ಟರ್ ಸಂಪತ್‍ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್‍ ರಾಯ್ಕರ್, ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯಾದವ್‍ ಕರ್ಕೇರ ಉಪಸ್ಥಿತರಿದ್ದರು.