ಬಂಟ್ವಾಳ: 42 ವರ್ಷದ ಶ್ರೀನಿವಾಸ್ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಣೆ ಆರಂಭಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಜೂನ್ 8 ರಂದು ಪ್ರಾರಂಭವಾದ ಈ ಫಾರ್ಮ್ ಕರ್ನಾಟಕದಲ್ಲಿ ಮೊದಲನೆಯದು ಮತ್ತು ದೇಶದಲ್ಲೇ ಎರಡನೆಯದು. ಇಂತಹ ಕತ್ತೆ ಸಾಕಣೆ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾತ್ರ ಇದೆ.
ತಿರಸ್ಕರಿಸಲಾದ ಮತ್ತು ಕಡಿಮೆ ಮೌಲ್ಯದ ಕತ್ತೆಗಳ ದುರವಸ್ಥೆ ನೋಡಿ ಮನನೊಂದು ಕತ್ತೆ ಸಾಕಣೆ ಫಾರ್ಮ್ ಪ್ರಾರಂಭಿಸಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಗೌಡ ಹೇಳುತ್ತಾರೆ. ಬಿಇ ಪದವೀಧರರಾಗಿರುವ ಇವರು ಸಾಫ್ಟ್‌ವೇರ್ ಕಂಪನಿಯಲ್ಲಿನ ಕೆಲಸವನ್ನು ತೊರೆದ ನಂತರ 2020 ರಲ್ಲಿ ಇರಾ ಗ್ರಾಮದ ಪರ್ಲಡ್ಕದಲ್ಲಿ 2.3 ಎಕರೆ ಜಾಗದಲ್ಲಿ ಸಮಗ್ರ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಕೇಂದ್ರ ಐಸಿರಿ ಫಾರ್ಮ್‌ಗಳನ್ನು ಪ್ರಾರಂಭಿಸಿದ್ದರು.
ಆರಂಭದಲ್ಲಿ ಮೇಕೆ ಸಾಕಾಣಿಕೆ ಆರಂಭಿಸಿ, ತದನಂತರ ಮೊಲ ಹಾಗೂ ಕಡಕ್ ನಾಥ್ ಕೋಳಿಗಳ ಸಾಕಣೆಯನ್ನು ಮಾಡುತ್ತಿರುವ ಶ್ರೀನಿವಾಸ್, ಮೊದಲಿಗೆ 20 ಕತ್ತೆಗಳೊಂದಿಗೆ ಫಾರ್ಮ್ ಆರಂಭಿಸಿದ್ದಾರೆ.
ಬಟ್ಟೆ ಒಗೆಯಲು ಬಟ್ಟೆ ಒಗೆಯುವ ಯಂತ್ರಗಳು ಹಾಗೂ ಇತರೆ ತಂತ್ರಜ್ಞಾನಗಳು ಬಂದಿರುವುದರಿಂದ ಅಗಸರು ಇಲ್ಲವಾಗಿ, ಕತ್ತೆಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಕತ್ತೆ ಸಾಕಣೆಯ ವಿಚಾರವನ್ನು ತಮ್ಮವರೊಂದಿಗೆ ಹಂಚಿಕೊಂಡಾಗ ಜನರು ಗೇಲಿ ಮಾಡಿದ್ದರು. ಕತ್ತೆಯ ಹಾಲು ರುಚಿಕರ ಆದರೆ ತುಂಬಾ ದುಬಾರಿ ಮತ್ತು ಇದು ಔಷಧೀಯ ಗುಣಗಳನ್ನು ಹೊಂದಿದೆ. ಕತ್ತೆ ಹಾಲನ್ನು ಪ್ಯಾಕೆಟ್‌ಗಳಲ್ಲಿ ಜನರಿಗೆ ಪೂರೈಸುವ ಯೋಜಿನೆ ಇದೆ. 30 ಎಂಎಲ್ ಹಾಲಿನ ಪ್ಯಾಕೆಟ್‌ಗೆ 150 ರೂಪಾಯಿ ವೆಚ್ಚವಾಗಲಿದ್ದು, ಮಾಲ್‌ಗಳು, ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳ ಮೂಲಕ ಸರಬರಾಜು ಮಾಡಲಾಗುವುದು ಎಂದು ಶ್ರೀನಿವಾಸ್ ಹೇಳಿದ್ದಾರೆ.
ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲು ಕತ್ತೆ ಹಾಲನ್ನು ಮಾರಾಟ ಮಾಡಲು ಮುಂದಾಗಿದ್ದು,17 ಲಕ್ಷ ಮೌಲ್ಯದ ಆರ್ಡರ್‌ಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Image credit : Deccan herald