ಉಡುಪಿ: ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ದಿನಾಚರಣೆ ಹಾಗೂ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳಾಗಿದ್ದು, ಮತದಾನದ ಮೂಲಕ ಜನಪ್ರತಿನಿಧಿಗಳಲ್ಲಿ ಆಯ್ಕೆ ಮಾಡುವ ಅವಕಾಶವಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾರ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅವಶ್ಯ. ಈ ಬಗ್ಗೆ ಜಾಗೃತಿ ಮೂಡಿಸಲು ಮತದಾರರ ದಿನಾಚರಣೆಯನ್ನು ಜನವರಿ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಅಜ್ಜರಕಾಡು ಪುರಭವನದಲ್ಲಿ
ಆಯೋಜಿಸಲಾಗಿದೆ ಎಂದರು.
ದಿನಾಚರಣೆಯ ಅಂಗವಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾವು ಅಂದು ಬೆಳಗ್ಗೆ 8.30 ಕ್ಕೆ ನಗರದ ಕ್ಲಾಕ್ ಟವರ್ನಿಂದ ಪುರಭವನದವರೆಗೆ ಮೆರವಣಿಗೆ ಸಾಗಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಹೊಸ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಸಿದ್ದವಿರುವ 17,000 ಕ್ಕೂ ಹೆಚ್ಚಿನ ಗುರುತಿನ ಚೀಟಿಯನ್ನು ನೋಂದಾಯಿತ ಅಂಚೆಯ ಮೂಲಕ ಮತದಾರರಿಗೆ ತಲುಪಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್ಪಿ ಡಾ. ಕೆ.ಎಸ್ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಜು ಮೊಗವೀರ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಾಲೂಕು ತಹಶೀಲ್ದಾರ್ಗಳು ಹಾಗೂ ಮತ್ತಿತರರು
ಉಪಸ್ಥಿತರಿದ್ದರು.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ
ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನವರಿ 01 ಅರ್ಹತಾ ದಿನಾಂಕವನ್ನಾಗಿಸಿಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ 10,245 ಯುವ ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಬೈಂದೂರು, ಕಾಪು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಸಹಾಯಕ ಕಮೀಷನರ್, ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್ಸೈಟ್ https://udupi.nic.in/en/election/ ನಲ್ಲಿ ಪ್ರಕಟಿಸಲಾಗಿದ್ದು, ಎಲ್ಲಾ ಮತದಾರರು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಅಂತಿಮ ಮತದಾರರ ಪಟ್ಟಿಯನ್ನು ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ತಾಲೂಕಿನ ಎಲ್ಲಾ ತಹಶೀಲ್ದಾರ್, ಬಿ.ಜೆ.ಪಿಯ ಚಂದ್ರಶೇಖರ್ ಪ್ರಭು, ಕಾಂಗ್ರೇಸ್ನ ಹಬೀಬ್ ಅಲಿ, ಜೆ.ಡಿ.ಎಸ್ ನ ಜಯರಾಮ್ ಆಚಾರ್ಯ, ಆಮ್ ಆದ್ಮಿ ಪಕ್ಷದ ಅರುಣ್ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.