ಮಣಿಪಾಲ ಡೆಂಟಲ್ ಕಾಲೇಜಿನಿಂದ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನ ಆಯೋಜನೆ

ಮಣಿಪಾಲ: ಶುಕ್ರವಾರ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯಲ್ಲಿ ಮೊದಲ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಲಾಯಿತು. ಮಣಿಪಾಲ ದಂತ ಸಮ್ಮೇಳನವು ಆಗಸ್ಟ್ 25 ರಿಂದ 27 ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಕಲಿಕೆಯ ಮಾದರಿಯಲ್ಲಿ ಬದಲಾವಣೆ ತಂದು ಪದವಿಪೂರ್ವ ಹಂತದಲ್ಲಿಯೇ ದಂತ ವೈದ್ಯಕೀಯ ವಿದ್ಯಾರ್ಥಿಗಳನ್ನು ಕ್ಷೇತ್ರದ ಸುಧಾರಿತ ಮಟ್ಟದ ಕಲಿಕೆಗೆ ಒಡ್ಡುವುದು ಈ ಸಮ್ಮೇಳನದ ಉದ್ದೇಶ.

ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಕೈಜೆನ್ ಡೆಂಟಲ್ ಇಂಡಿಯಾದ ಸಂಸ್ಥಾಪಕ ಡಾ. ಸತೀಶ್ ಕುಮಾರ್ ಮೆನನ್, ಓರಾ-ಡೆಂಟಲ್ ಕೇರ್‌ನಲ್ಲಿ ಮ್ಯಾಕ್ಸಿಲೊಫೇಶಿಯಲ್ ಪ್ರೊಸ್ಟೊಡಾಂಟಿಸ್ಟ್ ಡಾ.ಪಿ.ಸಿ.ಜೇಕಬ್, ಚೆನ್ನೈನ ಆಚಾರ್ಯ ಡೆಂಟಲ್‌ನಿಂದ ಡಾ. ವರುಣ್ ಆಚಾರ್ಯ, ಎಸ್.ಡಿ.ಎಮ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನಿಂದ ಡಾ. ಆಶಿತ್ ಆಚಾರ್ಯ, ಪ್ರೋಸ್ಟೋಡಾಂಟಿಸ್ಟ್ ಮತ್ತು ಸೆಲೆಬ್ರಿಟಿ ಸ್ಮೈಲ್ ಎಕ್ಸ್‌ಪರ್ಟ್ ಡಾ. ಸಾಗರ್ ಅಬಿಚಂದಾನಿ ಮುಂತಾದವರಿಂದ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.

ಉಪನ್ಯಾಸ ಕಾರ್ಯಕ್ರಮಗಳ ಜೊತೆಗೆ ಕಾರ್ಯಾಗಾರಗಳೂ ಇರಲಿದ್ದು, ಕೋಲ್ಟೀನ್ ಕಂಪನಿಯಿಂದ ಡಾ. ದೀಕ್ಷಾ ಕರ್ಕಡ, ಐಫಿಕ್ಸ್ ಇಂಪ್ಲಾಂಟ್‌ ಕಂಪನಿಯಿಂದ ಡಾ. ನೀತಾ ಶೆಟ್ಟಿ ಮತ್ತು ಓರಲ್ ಸರ್ಜನ್ ಡಾ. ವರುಣ್ ನಂಬಿಯಾರ್ ವಿವಿಧ ವಿಷಯಗಳ ಮೇಲೆ ಕಾರ್ಯಾಗಾರಗಳನ್ನು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ ಡಿ ವೆಂಕಟೇಶ್, ದಂತ ವೈದ್ಯಕೀಯ ಕಾಲೇಜಿನ ಡೀನ್ ಮೋನಿಕಾ ಷಾರ್ಲೆಟ್ ಸೊಲೊಮನ್ ಭಾಗವಹಿಸಿದ್ದರು.

ದೇಶದ ಉದ್ದಗಲಕ್ಕೂ ಇರುವ 18 ದಂತವೈದ್ಯಕೀಯ ಶಾಲೆಗಳಿಂದ 652 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ.