ನವದೆಹಲಿ: ದೇಶದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಹೊರಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇ-ಸಿಗರೇಟ್ ಆಮದು, ಉತ್ಪಾದನೆ, ವಿತರಣೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ.
ಅಮೆರಿಕ ಹೊರಹಾಕಿರುವ ಮಾಹಿತಿ ಪ್ರಕಾರ ಆ ದೇಶದಲ್ಲಿ ಶೇ 78ರಷ್ಟು ಮಂದಿ ಇ-ಸಿಗರೇಟು ಸೇವನೆಯಿಂದ ಮೃತಪಟ್ಟಿದ್ದಾರೆ. ಇ ಸಿಗರೇಟು ಸೇವನೆಯಿಂದ ಸಾವು ಪ್ರಕರಣಗಳು ಯುಎಸ್ ನಲ್ಲಿ ಶೇ 900ರಷ್ಟು ಅಧಿಕವಾಗಿವೆ. ಇದೇ ರೀತಿ ಇತರೆ ದೇಶಗಳಲ್ಲಿನ ದತ್ತಾಂಶಗಳನ್ನು ಪರಿಶೀಲಿಸಿ, ಭಾರತದಲ್ಲಿ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಧೂಮಪಾನದ ಚಟ ಬಿಡುವುದಕ್ಕೆ ಸಹಕಾರಿ ಎಂದು ಹೇಳಲಾಗುವ ಇ-ಸಿಗರೇಟ್ ಗಳನ್ನು ವಿಶ್ವಾದ್ಯಂತ ಅಪಾಯವಿಲ್ಲದ ಸರಕೆಂದು ಪರಿಗಣಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ತಜ್ಞರ ಹೇಳಿಕೆಯ ಪ್ರಕಾರ ಇ-ಸಿಗರೇಟ್ಗಳೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ-ಸಿಗರೇಟ್ಗಳನ್ನು ನಿಷೇಧಿಸಿದೆ.