ನ.12 ರಂದು ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್

ನವದೆಹಲಿ: ದೇಶದ ವಿವಿಧ ಆಯೋಗಗಳ ಮುಂದೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈ ವರ್ಷ ನವೆಂಬರ್ 12 ರಂದು ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, ದೇಶದಲ್ಲಿ ಸುಮಾರು ಆರು ಲಕ್ಷ ಎಂಟು ಸಾವಿರ ಗ್ರಾಹಕ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದೆ. ಲೋಕ ಅದಾಲತ್ ವ್ಯವಸ್ಥೆ ಮತ್ತು ಕಕ್ಷಿದಾರರ ನಡುವಿನ ಪರಸ್ಪರ ಇತ್ಯರ್ಥದ ಪ್ರಯೋಜನಗಳನ್ನು ಪರಿಗಣಿಸಿ ಹೆಚ್ಚಿನ ಸಂಖ್ಯೆಯ ಗ್ರಾಹಕ ಪ್ರಕರಣಗಳನ್ನು ವಿಲೇವಾರಿ ಮಾಡುವ ನಿರೀಕ್ಷೆಯಿದೆ ಎಂದು ಸಚಿವಾಲಯ ಹೇಳಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ದೂರವಾಣಿ ಸಂದೇಶ ಮತ್ತು ಇಮೇಲ್‌ಗಳ ಮೂಲಕ ಗ್ರಾಹಕರು, ಕಂಪನಿಗಳು ಮತ್ತು ಸಂಸ್ಥೆಗಳನ್ನು ತಲುಪಲಾಗುತ್ತಿದೆ. ಆಯೋಗಗಳ ಮುಂದೆ ಪ್ರಕರಣಗಳು ಬಾಕಿ ಇರುವ ಮೂರು ಲಕ್ಷ ಕಕ್ಷಿದಾರರ ದೂರವಾಣಿ ಸಂಖ್ಯೆಗಳು ಮತ್ತು ಇಮೇಲ್‌ಗಳನ್ನು ಇಲಾಖೆಯು ಹೊಂದಿದೆ.

ವಿಮಾ ಕ್ಷೇತ್ರದಲ್ಲಿ ಒಂದು ಲಕ್ಷದ ಅರ್ವತ್ತೆಂಟು ಸಾವಿರಕ್ಕೂ ಹೆಚ್ಚು, ಬ್ಯಾಂಕಿಂಗ್‌ನಲ್ಲಿ ಎಪ್ಪತ್ತೊಂದು ಸಾವಿರಕ್ಕೂ ಹೆಚ್ಚು, ವಿದ್ಯುತ್‌ ವಿಭಾಗದಲ್ಲಿ ಮೂವತ್ತಮೂರು ಸಾವಿರಕ್ಕೂ ಹೆಚ್ಚು, ರೈಲ್ವೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮತ್ತು ಇ-ಕಾಮರ್ಸ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾಕಿ ಇರುವ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಲೋಕ ಅದಾಲತ್ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ.

ಪ್ರಗತಿಪರ ಶಾಸನಗಳ ಮೂಲಕ ಗ್ರಾಹಕರ ರಕ್ಷಣೆ ಮತ್ತು ಸುರಕ್ಷತೆಯನ್ನು ಬಲಪಡಿಸುವುದು ಮತ್ತು ನ್ಯಾಯಯುತ ಮತ್ತು ಸಮರ್ಥ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳಿಗೆ ಪ್ರವೇಶವನ್ನು ಒದಗಿಸುವುದು ಇಲಾಖೆಯ ಧ್ಯೇಯವಾಗಿದೆ.