ಉಡುಪಿ: ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ ಅಧ್ಯಕ್ಷ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ನ ಸಂಸ್ಥಾಪಕ ಹನ್ಸಿ ಪ್ರವೀಣ್ ಕುಮಾರ್ ಅವರ ನೆನಪಿನ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಇದೇ ಸೆ. 6 ಮತ್ತು 7 ರಂದು ಉಡುಪಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಸಂಸ್ಥೆಯ ಉಪ ಮುಖ್ಯಶಿಕ್ಷಕ ಎಂ. ಸುರೇಶ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಎರಡು ದಿನಗಳ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 2 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸೆ. 6ರಂದು ಬೆಳಿಗ್ಗೆ 11ಗಂಟೆಗೆ ಚಲನಚಿತ್ರ ನಟ, ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ ಸಂಸ್ಥೆಯ ಚೇರ್ ಮ್ಯಾನ್ ಸುಮನ್ ತಲ್ವಾರ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.7ರಂದು ಸಂಜೆ 7ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಮುಖ್ಯ ಶಿಕ್ಷಕರಾದ ವಿನೋದ್ ಉಳ್ಳಾಲ್, ಆನಂದ್ ದೇವಾಡಿಗ, ಪ್ರಭಾಕರ್ ಕುಂದರ್, ಬಾಲಕೃಷ್ಣ ಆಳ್ವ, ಸ್ಪರ್ಧಾಕೂಟದ ಸಂಘಟಕ ಕಿರಣ್ ಮಾರ್ಷಲ್ ಉಪಸ್ಥಿತರಿದ್ದರು.












