ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಸಾವು

ಚಿಕ್ಕಮಗಳೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು, ಚಿಕ್ಕಮಗಳೂರು ತೇಗೂರು ಗ್ರಾಮದ ನಿವಾಸಿ ವಿನೋದ್ ರಾಜ್ (24) ಸಾವನ್ನಪ್ಪಿದ್ದಾರೆ.

ವಿನೋದ್ ರಾಜ್ ಇತ್ತೀಚೆಗಷ್ಟೇ ತನ್ನದೇ ಊರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಬಗ್ಗೆ ಎರಡೂ ಮನೆಯವರ ನಡುವೆ ತಕಾರಾರುಗಳಿದ್ದವು. ಈ ನಡುವೆ ಯುವತಿ ತವರು ಮನೆಗೆಂದು ತೆರಳಿದ್ದು, ಬಳಿಕ ಹಿಂದಿರುಗಿ ಬಂದಿರಲಿಲ್ಲ. ಈ ಘಟನೆಯಾದ ಬಳಿಕ ವಿನೋದ್ ರಾಜ್ ಖಿನ್ನತಗೆ ಜಾರಿದ್ದು, ನೇಣುಬಿಗಿದುಕೊಂಡಿದ್ದರು.

ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.