ಮೂಡುಬಿದಿರೆ: ಜನವರಿ 1 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ೮೦ನೇ ಅಖಿಲ ಭಾರತ ಅಂತರ್ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಫ್ ಅನ್ನು ಆಯೋಜಿಸಲಾಗಿದೆ.
ಈ ಕ್ರೀಡಾಕೂಟವು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಕ್ರೀಡಾಕೂಟದಲ್ಲಿ ದೇಶದ ೪೦೦ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 5೦೦೦ ಅಥ್ಲೀಟ್ಗಳು ಹಾಗೂ 2೦೦೦ ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟದ ವ್ಯವಸ್ಥೆಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಒಂದು ಕೋಟಿ ರೂ. ಅನುದಾನ ದೊರೆತಿದೆ. ಇದರೊಟ್ಟಿಗೆ ರಾಜ್ಯ ಸರ್ಕಾರದಿಂದ ೫೦ ಲಕ್ಷ ರೂ. ನೀಡುವ ಕುರಿತು ಕ್ರೀಡಾಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾನ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಉದ್ಘಾಟನೆಗೆ ಕಿರಣ್ ರಿಜಿಜು
ಜ.2ರಂದು ಸಂಜೆ 5.45ಕ್ಕೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಕೂಟವನ್ನು ಉದ್ಘಾಟಿಸಲಿದ್ದಾರೆ. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ ಎಸ್ ಸಚ್ಚಿದಾನಂದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕ್ರೀಡಾ ಸಚಿವ ಕೆ. ಎಸ್. ಈಶ್ವರಪ್ಪ, ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕ್ರೀಡಾಜ್ಯೊತಿಯನ್ನು ಸ್ವೀಕರಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ್ಯದರ್ಶಿ ಡಾ ಬಲ್ಜೀತ್ ಸಿಂಗ್ ಸೋಖನ್, ಸ್ಪೋರ್ಟ್ಸ ಆಥಾರಿಟಿ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್ ಸಂದೀಪ್ ಪ್ರಧಾನ್ ವಿಶೇಷ ಆಹ್ವೌನಿತರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಸಮಾರೋಪ ಸಮಾರಂಭ
ಕ್ರೀಡಾಕೂಟದ ಸಮಾರೋಪ ಸಮಾರಂಭವು ಜನವರಿ ೬ರಂದು ಮಧ್ಯಾಹ್ನ ೩ ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ ಜರುಗಲಿದ್ದು, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ.ಎಸ್. ಸಚ್ಚಿದಾನಂದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ಅಮರ್ನಾಥ್ ಶೆಟ್ಟಿ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್ಜಿಯುಎಚ್ಎಸ್ನ ಡೆಪ್ಯುಟಿ ರಿಜಸ್ಟ್ರಾರ್ ಡಾ.ಬಿ.ವಸಂತ್ ಶೆಟ್ಟಿ, ಆರ್ಜಿಯುಎಚ್ಎಸ್ನ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ಆರ್ಜಿಯುಎಚ್ಎಸ್ನ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟೀ ವಿವೇಕ್ ಆಳ್ವ ಉಪಸ್ಥಿತರಿದ್ದರು.