ಮಂಗಳೂರು: ಕಳೆದ ಏಳು ವರ್ಷಗಳಿಂದ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವವನ್ನು ಆಚರಿಸುತ್ತಿರುವ ಅರೆಹೊಳೆ ಪ್ರತಿಷ್ಠಾನವು ಈ ವರ್ಷ ಎಂಟನೆಯ ನಾಟಕೋತ್ಸವವನ್ನು ಡಿಸೆಂಬರ್ 9 ರಿಂದ 11ರತನಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಸಭಾಂಗಣದಲ್ಲಿ ಆಯೋಜಿಸಿದೆ.
ನಾಟಕೋತ್ಸವದ ಮೊದಲ ದಿನ ಡಿ.09 ರಂದು ಉಡುಪಿ ಉದ್ಯಾವರದ ಗಲಾಟೆ ತಂಡದ ಕೀರ್ತನ ಉದ್ಯಾವರ ಅವರ ಏಕವ್ಯಕ್ತಿ ನಾಟಕ ಯತ್ರ ನಾರ್ಯಸ್ತು ಪೂಜ್ಯಂತೇ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಕಥೆ ಸುಧಾ ಅಡುಕಳ ಅವರದ್ದಾಗಿದ್ದು ರಂಗ ರೂಪ ವಿನ್ಯಾಸ ಮತ್ತು ನಿರ್ದೇಶನವನ್ನು ಪ್ರಶಾಂತ್ ಕೋಟ ಮಾಡಿದ್ದಾರೆ. ಎರಡನೆಯ ದಿನ ಡಿ.10 ರಂದು ಬೆಂಗಳೂರಿನ ಕೈವಲ್ಯ ಕಲಾ ಕೇಂದ್ರದಿಂದ ಸುಧಾ ಅಡುಕಳ ಅವರ ಕಥೆಯ ನಾಟಕ ಮಾಧವಿ ಪ್ರದರ್ಶನಗೊಳ್ಳಲಿದೆ. ದಿವ್ಯಶ್ರೀ ನಾಯಕ್ ಸುಳ್ಯ ಹಾಗೂ ಶರತ್ ಬೋಪಣ್ಣ ಅವರ ಅಭಿನಯದ ಈ ನಾಟಕವನ್ನು ಡಾ. ಶ್ರೀಪಾದ್ ಭಟ್ ನಿರ್ದೇಶಸಿದ್ದಾರೆ.
ಡಿ.11 ಭಾನುವಾರದಂದು ಬೆಂಗಳೂರಿನ ರಂಗ ಚಂದಿರ ತಂಡದಿಂದ ಲೆಟರ್ಸ್ ಟು ಡೆತ್ ನಾಟಕ ಪ್ರದರ್ಶನಗೊಳ್ಳಲಿದ್ದು, ಇದರ ನಿರ್ದೇಶನವನ್ನು ಡಾ. ಬೇಲೂರು ರಘು ನಂದನ್ ರವರು ಮಾಡಿದ್ದಾರೆ. ನಾಟಕದಲ್ಲಿ ಹರ್ಷವರ್ಧನ್ ಚಂದ್ರಶಂಕರಿ ಹಾಗೂ ಶ್ರೀನಿವಾಸ್ ಅಭಿನಯಿಸಲಿದ್ದಾರೆ. ಎಲ್ಲಾ ನಾಟಕಗಳು ಅರೆ ಹೊಳೆಯಲ್ಲಿ ನಿರ್ಮಾಣವಾಗುತ್ತಿರುವ ರಂಗಶಾಲೆಯ ನಿರ್ಮಾಣದ ಆರ್ಥಿಕ ಕ್ರೋಡೀಕರಣದ ಭಾಗವಾಗಿ ರೂಪಾಯಿ 100 ಪ್ರವೇಶದರದೊಂದಿಗೆ ಪ್ರದರ್ಶನಗೊಳ್ಳಲಿದೆ. ಯಾವುದೇ ಸಭಾ ಕಾರ್ಯಕ್ರಮಗಳು ನಾಟಕೋತ್ಸವದಲ್ಲಿ ಇರುವುದಿಲ್ಲ ಮತ್ತು ಸರಿಯಾಗಿ 7:00ಗೆ ನಾಟಕ ಆರಂಭಗೊಳ್ಳಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.