ಮೂಗಿನ ಕೋವಿಡ್ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ 800 ರೂ, ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗೆ ಲಭ್ಯ

ನವದೆಹಲಿ: ಭಾರತ್ ಬಯೋಟೆಕ್ ನ ಮೂಗಿನ ಕೋವಿಡ್ ಲಸಿಕೆ ಇಂಕೋವಾಕ್ ಬೆಲೆಗಳನ್ನು ಕೇಂದ್ರ ಸರಕಾರವು ಮಂಗಳವಾರ ನಿಗದಿಪಡಿಸಿದೆ. ಮೂಗಿನ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಉಪಯೋಗಿಸಬಹುದಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗಳಿಗೆ ಲಭ್ಯವಿರಲಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಜನವರಿ ನಾಲ್ಕನೇ ವಾರದಿಂದ ದೇಶಾದ್ಯಂತ ಇಂಕೋವಾಕ್ ಲಭ್ಯವಿರಲಿದೆ. 18 ವರ್ಷ ಮೇಲ್ಪಟ್ಟವರು, ಈಗಾಗಲೇ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ತೆಗೆದುಕೊಂಡಿರುವವರು ಬೂಸ್ಟರ್ ಡೋಸ್ ನ ಬಹು ಆಯ್ಕೆಯಾಗಿ ಇಂಕೋವಾಕ್ ಅನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಈ ಲಸಿಕೆಯು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ. ಇಂಕೋವಾಕ್ ಕೋವಿಡ್ ಗೆ ನೀಡಲಾಗುವ ಪ್ರಪಂಚದ ಮೊಟ್ಟ ಮೊದಲ ಮೂಗಿನ ಲಸಿಕೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮೊದಲು ಇಂಕೋವಾಕ್ ಅನ್ನು ಪ್ರಾಥಮಿಕ ಎರಡನೇ ಡೋಸ್ ಹಂತದ ತುರ್ತುಪರಿಸ್ಥಿತಿಗಳಲ್ಲಿ ಉಪಯೋಗಿಸಲು ಅನುಮೋದನೆ ದೊರೆತಿತ್ತು. ಇದೀಗ ಪ್ರಾಥಮಿಕ 2 ನೇ ಹಂತದ ಬೂಸ್ಟರ್ ಡೋಸ್ ನ ಬಹುಆಯ್ಕೆಯಾಗಿ ಇಂಕೋವಾಕ್ ಅನ್ನು ಆಯ್ಕೆ ಮಾಡಲು ಕೇಂದ್ರದ ಅನುಮೋದನೆ ದೊರೆತಿದೆ. ಸಾರ್ವಜನಿಕರಿಗೆ ಇಂಕೋವಾಕ್ ಆಯ್ಕೆ ಮಾಡಲು ಸಹಾಯವಾಗುವಂತೆ ಕೋವಿನ್ ಪೋರ್ಟಲ್ ಗೆ ಶೀಘ್ರದಲ್ಲೇ ಬದಲಾವಣೆ ಮಾಡಲಾಗುವುದು ಎಂದು ಎ.ಎನ್.ಐ ವರದಿ ಮಾಡಿದೆ.