ಉಡುಪಿ: ನಮ್ಮ ದೇಶದ ಭವ್ಯ ಪ್ರಾಚೀನ ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾಗಿರುವ ಸಂಗೀತ, ನೃತ್ಯ ಕಲೆಯನ್ನು ಇಂದಿನ ಯುವ ಪೀಳಿಗೆಗೆ ದಾಟಿಸುವ ಅಗತ್ಯವಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಗುರುವಾರ ಉಡುಪಿ ಬ್ರಹ್ಮಗಿರಿಯ ಕಾಡಬೆಟ್ಟುವಿನಲ್ಲಿ ನೃತ್ಯಗುರು ವಿದುಷಿ ಶಾಂಭವಿ ಆಚಾರ್ಯ ಅವರ ಭರತನಾಟ್ಯ ತರಬೇತಿ ಶಾಲೆ ‘ನರ್ತಕಿ’ಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಭಾರತದಲ್ಲಿ ರಾಜಾಶ್ರಯ ಪಡೆದಿದ್ದ, ಭರತಮುನಿಗಳಿಂದ ಲೋಕಾರ್ಪಣೆಗೊಂಡ ಈ ಶ್ರೀಮಂತ ಭರತ ನಾಟ್ಯ ಕಲೆಯನ್ನು ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳು ಅಭ್ಯಾಸಿಸುತ್ತಿರುವುದು ಶ್ಲಾಘನೀಯ. ನೃತ್ಯ, ಸಂಗೀತ ದೇಹ -ಮನಸ್ಸನ್ನು ಪ್ರಸನ್ನಗೊಳಿಸುವುದಲ್ಲದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಪ್ರೇರಕಾಗಿದೆ. ಭರತ ನಾಟ್ಯವನ್ನು ಅಭ್ಯಾಸಿಸಿದ ಮಂದಿ ಬಹಳಷ್ಟು ಮಂದಿ ಸಾಧನೆಯ ಉತ್ತುಂಗಕ್ಕೇರಿರುವುದನ್ನು ನಾವು ಕಂಡಿದ್ದೇವೆ ಎಂದು ಅವರು ತಿಳಿಸಿದರು.
ಕರಾವಳಿಯ ಗಂಡುಕಲೆ ಯಕ್ಷಗಾನ ಹಾಗೂ ಭರತನಾಟ್ಯಕ್ಕೆ ಅವಿನಾಭಾವ ಸಂಬಂಧವಿದೆ. ಈ ಎರಡೂ ಕಲೆಗಳು ಕರಾವಳಿಯಲ್ಲಿ ಪ್ರಖ್ಯಾತಿ ಪಡೆದಿರುವುದಲ್ಲದೆ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಭ್ಯಾಸಿಸುತ್ತಿರುವುದನ್ನು ಕಂಡಾಗ ಮನಸ್ಸು ಸಂತೃಪ್ತಿಗೊಳ್ಳುತ್ತದೆ. ಸಂಗೀತ – ನೃತ್ಯದಿಂದ ಭಗವಂತನನ್ನು ಕೂಡಾ ಸಾಕ್ಷಾತ್ಕಾರಗೊಳಿಸಿದ ಪ್ರಸಂಗಗಳನ್ನು ಪುರಾಣದಲ್ಲಿ ಉಲ್ಲೇಖಗೊಂಡಿವೆ. ಈ ನಿಟ್ಟಿನಲ್ಲಿ ಈ ಕಲಾ ಸಂಪತ್ತನ್ನು ಅಭ್ಯಾಸಿಸಿ, ಯುವ ಪೀಳಿಗೆಗೆ ದಾಟಿಸುವ ಕೈಂಕರ್ಯ ನಡೆಸುತ್ತಿರುವ ವಿದುಷಿ ಶಾಂಭವಿ ಆಚಾರ್ಯ ಅವರ ಈ ಕಲಾತಪಸ್ಸು ಯಶಸ್ವಿಯ ಉತ್ತುಂಗಕ್ಕೇರಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸುಮಾ ವಿಜಯ್ ಕುಮಾರ್ ಮಾತನಾಡಿ, ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆತಾಗ ಉನ್ನತ ಸಾಧನೆಯನ್ನು ಮಾಡಲು ಸಾಧ್ಯ. ಈಗಾಗಲೇ ಸಂತೆಕಟ್ಟೆ,ಮಂದಾರ್ತಿ, ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ನೃತ್ಯ ತರಬೇತಿಯನ್ನು ನೀಡುತ್ತಿರುವ ನರ್ತಕಿಯ ಮುಂದಿನ ಪಯಣ ಉತ್ತಮವಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಾಟ್ಯ ವಿದುಷಿ ಲಕ್ಷ್ಮಿ ಗುರುರಾಜ್, ನಗರಸಭೆ ಸದಸ್ಯ ಟಿ.ಜಿ.ಹೆಗಡೆ, ಸಾಧನ ಕಲಾ ಸಂಗಮದ ಮುಖ್ಯಸ್ಥ ನಾರಾಯಣ ಐತಾಳ್, ಕೃಷ್ಣಗಾನ ಸುಧಾದ ಗುರುಗಳಾದ ಉಷಾ ಹೆಬ್ಬಾರ್, ಸಮಾಜ ಸೇವಕಿ ನಿರುಪಮಾ ಪ್ರಸಾದ್ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕಿ ವಿದುಷಿ ಶಾಂಭವಿ ಆಚಾರ್ಯ ಸ್ವಾಗತಿಸಿದರು. ಶ್ರೀಪಾದ ಹೆಗಡೆ ವಂದಿಸಿದರು. ಪ್ರವೀಣ್ ಆಚಾರ್ಯ ನಿರೂಪಿಸಿದರು.
ನರ್ತಕಿ ಉಡುಪಿ ಇದರಲ್ಲಿ ಭರತನಾಟ್ಯ, ಸಂಗೀತ ಹಾಗೂ ಅಭಿನಯ ತರಬೇತಿಗಳನ್ನು ನೀಡಲಾಗುತ್ತದೆ.