ಅಮೃತಕಾಲದ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ಯ ಠೇಂಕಾರ!! ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾದ ಕರ್ತವ್ಯ ಪಥ

ನವದೆಹಲಿ: ಭಾರತವು ತನ್ನ 75 ನೇ ಗಣರಾಜ್ಯೋತ್ಸವದ ಆಚರಣೆಯೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ. ರಾಷ್ಟ್ರದ ರಾಜಧಾನಿಯ ಕರ್ತವ್ಯ ಪಥದಲ್ಲಿ ಭವ್ಯವಾದ ಪರೇಡ್ ಭಾರತದ ಮಿಲಿಟರಿ ಪರಾಕ್ರಮ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದ್ದಲ್ಲದೆ, ನಾರಿ ಶಕ್ತಿ ಮತ್ತು ಮಹಿಳಾ ಸಬಲೀಕರಣವನ್ನು ಅನಾವರಣಗೊಳಿಸಿದೆ.

ಇದೇ ಮೊದಲ ಬಾರಿಗೆ, ಎಲ್ಲಾ ಮಹಿಳಾ ತ್ರಿ-ಸೇವಾ ದಳವು ಪರೇಡ್‌ನಲ್ಲಿ ಭಾಗವಹಿಸಿತು. ಆರ್ಮಿ ಡೆಂಟಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಬಾ ಸಮಂತ್, ಭಾರತೀಯ ನೌಕಾಪಡೆಯ ಸರ್ಜ್ ಲೆಫ್ಟಿನೆಂಟ್ ಕಾಂಚನಾ, ಭಾರತೀಯ ವಾಯುಪಡೆಯ ಫ್ಲಿಟ್ ಲೆಫ್ಟಿನೆಂಟ್ ದಿವ್ಯ ಪ್ರಿಯಾ ಅವರೊಂದಿಗೆ ಮೇಜರ್ ಸೃಷ್ಟಿ ಖುಲ್ಲರ್ ನೇತೃತ್ವದಲ್ಲಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಎಲ್ಲಾ ಮಹಿಳಾ ತಂಡವು ಕರ್ತವ್ಯ ಪಥದಲ್ಲಿ ಮೊದಲ ಬಾರಿಗೆ ಮೆರವಣಿಗೆ ನಡೆಸಿತು.

ಜೊತೆಗೆ ಹದಿನೈದು ಮಹಿಳಾ ಪೈಲಟ್‌ಗಳು ಭಾರತೀಯ ವಾಯುಪಡೆಯ ಫ್ಲೈ-ಪಾಸ್ಟ್‌ನ ಭಾಗವಾಗಿದ್ದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಗಳು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದ್ದವು.

ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‌ಗಳ ಬದಲಿಗೆ ಮೊದಲ ಬಾರಿಗೆ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳಾದ ಶಂಖ, ನಾದಸ್ವರ, ಚೆಂಡೆ ಮತ್ತು ಡೋಲು ನುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹದಿನಾರು ಟ್ಯಾಬ್ಲೋ ಜೊತೆಗೆ ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳ ಒಂಬತ್ತು ಟ್ಯಾಬ್ಲೋ ಗಳು ಕೂಡಾ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಾ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಿದವು.

BSF ಒಂಟೆಗಳ ಮಹಿಳಾ ತಂಡವು ಇದೇ ಮೊದಲ ಬಾರಿಗೆ ಕರ್ತವ್ಯ ಪಥದಲ್ಲಿ ಮೆರವಣಿಗೆ ನಡೆಸಿತು.

BSF, CRPF ಮತ್ತು SSB ಯ 265 ಮಹಿಳಾ ಬೈಕರ್‌ಗಳು ಕರ್ತವ್ಯ ಪಥದಲ್ಲಿ ತಮ್ಮ ಬೈಕ್ ಸಾಹಸವನ್ನು ಪ್ರದರ್ಶಿಸಿ ಕಾರ್ಯಕ್ರಮವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದರು.

ಒಟ್ಟಾರೆಯಾಗಿ 75 ನೇ ಗಣರಾಜ್ಯೋತ್ಸವವು ಅಮೃತಕಾಲದ ನಾರಿಯರ ಶಕ್ತಿ ಧೈರ್ಯ ಸಾಹಸ ಮತ್ತು ಸಾಧನೆಯನ್ನು ಜಗತ್ತಿಗೆ ಪರಿಚಯಿಸಿತು.