ಉಡುಪಿ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೆಡ್ ನಲ್ಲಿ ಭಾಗವಹಿಸಲು ಪ್ರತೀ ರಾಜ್ಯದಿಂದ ಒಂದೊಂದು ಸ್ತಬ್ಧ ಚಿತ್ರ ಕಳುಹಿಸುವುದು ವಾಡಿಕೆ. ಅದರಂತೆ ಈ ಬಾರಿ ಕೇರಳ ರಾಜ್ಯವು ವಿಶ್ವ ವಿಖ್ಯಾತ ಸಮಾಜ ಸುಧಾರಣೆಯ ಹರಿಕಾರ “ಬ್ರಹ್ಮಶ್ರೀ ನಾರಾಯಣ ಗುರುಗಳ” ಸ್ತಬ್ಧ ಚಿತ್ರವನ್ನು ಕಳುಹಿಸಿತ್ತು.
ಆದರೆ ಕೇಂದ್ರ ಸರ್ಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ವಿಶ್ವಮಾನ್ಯ ಸಂತನಿಗೆ ಮಾಡಿದ ಅಗೌರವ ಎಂದು ಉಡುಪಿ ಜಿಲ್ಲಾ ರಾಮ್ ಸೇನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಸಮಾಜ ಸುಧಾರಕರಾದ ನಾರಾಯಣ ಗುರುಗಳು ಜಾತಿ ಧರ್ಮದ ಹೆಸರಿನಲ್ಲಿ ಗುರುತಿಸಿ ಕೊಂಡವರಲ್ಲ, ಒಂದೇ ಜಾತಿ, ಒಂದೇ ಕುಲ ಏಂಬ ಶಾಂತಿಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ. ಅಂಬೇಡ್ಕರ್, ರವೀಂದ್ರನಾಥ ಠಾಗೋರ್ ರಂತಹ ಮಹಾನ್ ನಾಯಕರೇ ಗುರುಗಳನ್ನು ಗೌರವಿಸಿದ್ದರು. ಶೋಷಿತರ, ಬಡವರ್ಗದವರ ಏಳಿಗೆಗಾಗಿ ಶ್ರಮಿಸಿ ಅಮರರಾದ ಇಂತಹ ಮಹಾನ್ ಸಂತರ ಸ್ತಬ್ಧ ಚಿತ್ರಕ್ಕೆ ಗಣರಾಜ್ಯೋತ್ಸವದಲ್ಲಿ ಅವಕಾಶ ನೀಡದಿರುವುದು ಕೋಟ್ಯಾಂತರ ಗುರು ಭಕ್ತರಿಗೆ ಅತೀವ ನೋವಾಗಿದೆ.
ಕೇಂದ್ರ ಸರ್ಕಾರದಿಂದ ಆದ ಪ್ರಮಾದವನ್ನು ಸರಿಪಡಿಸಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.