ಉಡುಪಿ: ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟಾಗ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು.
ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಮೀನುಗಾರರ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಕುಟುಂಬಸ್ಥರು ಇವತ್ತು ಬರ್ತಾರೆ ನಾಳೆ ಬರ್ತಾರೆ ಎಂದು ಕಾಯುತ್ತಲೇ ಇದ್ದಾರೆ. ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗಳಿಗೆ ಭೇಟಿ ನೀಡಿದಾಗ ಅವರಿಬ್ಬರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾದರು.
ಕೊನೆಗೆ ದುಃಖಿತರನ್ನು ಸಮಾಧಾನಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಮೀನುಗಾರರನ್ನು ಹುಡುಕಲು ಕಾರ್ಯಪ್ರವೃತರಾಗಿದ್ದೇವೆ ಎಂದು ದುಃಖತಪ್ತ ಕುಟುಂಬಕ್ಕೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಕುಟುಂಬದವರನ್ನು ಸಮಾಧಾನ ಪಡಿಸಿದರು. ಲಭ್ಯವಿರುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾಪತ್ತೆಯಾಗಿರುವ ಮೀನುಗಾರರ ನಡೆಸಿದ್ದೇವೆ. ಇನ್ನೂ ಬೇಕಾದರೂ ಮೀನುಗಾರರ ಜತೆಗೆ ಸೇರಿಕೊಂಡು ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸುತ್ತಿವೆ ಎಂದರು.
ನಾಪತ್ತೆಯಾಗಿರುವ ಮೀನುಗಾರರು ಕುಟುಂಬಕ್ಕೆ ಆಧಾರವಾಗಿದ್ದರು. ಈಗ ಅವರ ಮನೆಯವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡುವ ಕೆಲಸ ಆಗಬೇಕೆಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಆಗ್ರಹಿಸಿದರು. ಉಡುಪಿ ಶಾಸಕ ರಘುಪತಿ ಭಟ್ ಮೊದಲಾದ ಮುಖಂಡರು ಇದ್ದರು.