ಒಬ್ಬ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿಯ ಗೌರವ; ದನಕಾಯುವ ಮತ್ತೊಬ್ಬ ಮಹಿಳೆಗೆ ರಾಷ್ಟ್ರಪ್ರಶಸ್ತಿಯ ಗರಿ! ಇದು ಬದಲಾದ ಭಾರತದ ಮಹಿಳೆಯರ ಯಶೋಗಾಥೆ….

ಪಾಲಕ್ಕಡ್: ಆಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಎಂಬ ಪುಟ್ಟ ಹಳ್ಳಿಯಲ್ಲಿ ದನ ಮೇಯಿಸುವ ಬುಡಕಟ್ಟು ಜನಾಂಗದ ಮಹಿಳೆ. ಆಕೆ ಹಾಡಿದ ಚಲಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಅತ್ತ ಒಡಿಸ್ಸಾದ ಪುಟ್ಟ ಹಳ್ಳಿಯಿಂದ ಬಂದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು, ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ್ದಾರೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಇದನ್ನೆಲ್ಲ ಊಹಿಸಲೂ ಸಾಧ್ಯವಿರಲಿಲ್ಲ. ರಾಜಕೀಯದಲ್ಲಾಗಲೀ, ಸಿನಿಮಾ ರಂಗದಲ್ಲಾಗಲೀ ಗಾಡ್ ಫಾದರ್, ಮದರ್ ಗಳಿಲ್ಲದೆ ಕೇವಲ ತಮ್ಮ ಪ್ರತಿಭೆ ಮತ್ತು ಸ್ವಂತ ಬಲದಿಂದಲೇ ತಮ್ಮ ಬುಡಕಟ್ಟು ಜನಾಂಗದ ಕೀರ್ತಿಯನ್ನು ಇಡೀ ದೇಶಕ್ಕೇ ಪಸರಿಸಿದ ಈ ಇಬ್ಬರು ಮಹಿಳೆಯರ ಯಶೋಗಾಥೆ ಎಲ್ಲ ಮಹಿಳೆಯರಿಗೂ ಒಂದು ಪಾಠ.

ಕೇರಳದ ನಂಜಿಯಮ್ಮ ಈಗ ಸೂಪರ್ ಸ್ಟಾರ್ ಸಿಂಗರ್!!

ಕೇರಳದ ಪಾಲಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಬುಡಕಟ್ಟು ಜನಾಂಗದ ಜಾನಪದ ಗಾಯಕಿ ನಂಜಿಯಮ್ಮ, ದಿವಂಗತ ಕೆಆರ್ ಸಚ್ಚಿದಾನಂದನ್ ನಿರ್ದೇಶನದ ‘ಅಯ್ಯಪ್ಪನುಮ್ ಕೊಶಿಯುಂ’ (2020) ಚಿತ್ರಕ್ಕಾಗಿ ಬರೆದು ಹಾಡಿದ “ಕಲಕ್ಕಾಥಾ….” ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಚಿತ್ರವು ಶುಕ್ರವಾರ ಘೋಷಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನಂಜಿಯಮ್ಮನವರ ‘ಕಲಕ್ಕಾಥಾ’ ಹಾಡು, ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಬುಡಕಟ್ಟು ಗ್ರಾಮದ ಕಳೆದುಹೋದ ಸಂಗೀತದ ಗುರುತನ್ನು ಮರಳಿ ಪಡೆಯಲು ಸಹಾಯ ಮಾಡಿದೆ.

ಜನಪದ ಗಾಯಕಿ ನಂಜಿಯಮ್ಮ ತನ್ನ 15 ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅವರ ಪತಿ ನಂಜಪ್ಪನವರು ಯಾವಾಗಲೂ ಅವರ ಪ್ರತಿಭೆಯನ್ನು ತೋರಿಸಿಕೊಳ್ಳುವಂತೆ ಪತ್ನಿಯನ್ನು ಪ್ರೋತ್ಸಾಹಿಸುತ್ತಿದ್ದರು. ನಂಜಿಯಮ್ಮ ಈಗ ಎಷ್ಟೇ ಜನಪ್ರಿಯರಾಗಿದ್ದರೂ ತನ್ನ ಜಾನುವಾರುಗಳನ್ನು ಪ್ರತಿದಿನ ಮೇಯಿಸಲು ಕರೆದುಕೊಂಡು ಹೋಗುವುದನ್ನು ಬಿಡುವುದಿಲ್ಲ. ಅತ್ಯಂತ ನಿಗರ್ವಿ ಜೀವನವನ್ನು ನಡೆಸುವ ನಂಜಿಯಮ್ಮನಿಗೆ ತಾನು ಹಾಡಿದ ಚಲನಚಿತ್ರದ ನಾಯಕ ನಟನಾರೆಂಬುದೇ ಗೊತ್ತಿಲ್ಲದಷ್ಟು ಮುಗ್ದೆ!

“ನನ್ನ ಮಗ ರಾಷ್ಟ್ರ ಪ್ರಶಸ್ತಿ ಘೋಷಣೆಯ ಬಗ್ಗೆ ಹೇಳಿದ್ದಾನೆ. ನಾವೆಲ್ಲರೂ ಟಿವಿಯಲ್ಲಿ ಪ್ರಶಸ್ತಿ ಘೋಷಣೆಯನ್ನು ವೀಕ್ಷಿಸಿದ್ದೇವೆ” ಎಂದು ಅವರು ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗಿನ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಹೇಳಿದ್ದಾರೆ.

ಅಟ್ಟಪ್ಪಾಡಿ ಈಗ ರಾಷ್ಟ್ರಮಟ್ಟದಲ್ಲಿ ಜನಮೆಚ್ಚುಗೆ ಗಳಿಸುತ್ತಿದೆ ಎಂದು ತಿಳಿಸಿದಾಗ, “ನಮ್ಮ ದೇಶದಲ್ಲಿ ಎಲ್ಲರೂ ಜೀವನದಲ್ಲಿ ಯಶಸ್ಸು ಸಾಧಿಸಲಿ” ಎಂದು ನಂಜಿಯಮ್ಮ ಅತ್ಯಂತ ಮುಗ್ದತೆ ಮತ್ತು ನಿಷ್ಕಲ್ಮಶ ಮನಸ್ಸಿನಿಂದ ಹಾರೈಸಿದ್ದಾರೆ. ಮಹಿಳಾ ಸಶಕ್ತೀಕರಣವೆಂದರೆ ಇದೆ ತಾನೆ?