ನಂದೇಶ್ವರ: ಸಂಸ್ಕೃತ ಭಾಷೆ ಮಾತನಾಡಿ ದೇಶದ ಗಮನ ಸೆಳೆದ ನಂದೇಶ್ವರ ಗ್ರಾಮ

ಚಿಕ್ಕೋಡಿ : ಭಾರತ ದೇಶದ ಪರಂಪರೆಯಲ್ಲಿ ಮಠ – ಮಂದಿರಗಳು ತನ್ನದೇ ಆದಂತಹ ಪ್ರಮುಖ ಪಾತ್ರ ವಹಿಸಿವೆ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿ, ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಶಿಕ್ಷಣ, ಅನ್ನದಾಸೋಹ, ಸಂಸ್ಕೃತಿ, ಉತ್ತಮ ವಿಚಾರಧಾರೆ, ಭಕ್ತಿ ಭಂಡಾರಗಳನ್ನು ಸಾರುತ್ತ ಮಠಗಳ ಚಾರಿತ್ರ್ಯವನ್ನು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಹಲವು ಮಠಾಧೀಶರು ಕೂಡಾ ಕಾರ್ಯ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಜನರ ದೈನಂದಿನ ವ್ಯವಹಾರ ಸಂಸ್ಕೃತದಲ್ಲಿಯೇ ನಡೆಯುತ್ತಿದೆ.

ಆಧುನಿಕ ಯುಗದಲ್ಲಿ ಹಲವು ಮಠಾಧೀಶರುಗಳ ನಡುವೆ ನಂದೇಶ್ವರ ಗ್ರಾಮದ ಪರಮ ಪೂಜ್ಯ ಸದ್ಗುರು ಶ್ರೀ ದುಂಡೇಶ್ವರ ಮಹಾಸ್ವಾಮಿಗಳವರು ಸಂಸ್ಕೃತ ಕ್ರಾಂತಿ ಮಾಡಿದ್ದು, ದೇಶವೇ ಒಂದು ಸಾರಿ ಈ ಗ್ರಾಮವನ್ನು ತಿರುಗಿ ನೋಡುವಂತೆ ಶ್ರಮಿಸಿದ್ದಾರೆ. ಗ್ರಾಮದ ಎಲ್ಲರಿಗೂ ಸಂಸ್ಕೃತ ಭಾಷೆ ಕಲಿಸಿ, ಪರಂಪರೆಯ ದೇವಲಿಪಿಯ ಉಳಿವಿಗೆ ಶ್ರೀಗಳು ಮುಂದಾಗಿದ್ದಾರೆ. ಈ ಗ್ರಾಮದ ಬಹುತೇಕರು ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಮಠಾಧೀಶರಾದ ದುಂಡೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ 2015 ರಿಂದ ಗ್ರಾಮದಲ್ಲಿ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಲಾಗಿದೆ. ಸದ್ಯ ನಂದೇಶ್ವರ ಮಠದಲ್ಲಿ 300 ವಿದ್ಯಾರ್ಥಿಗಳು ನಿತ್ಯ ಸಂಸ್ಕೃತ ಪಾಠವನ್ನು ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮದ ಬಹುತೇಕ ಜನರಿಗೆ ಶ್ರೀಗಳು ನಿತ್ಯ ಬಳಸುವ ಪದಗಳನ್ನ ಸಂಸ್ಕೃತದಲ್ಲಿಯೇ ಕಲಿಸುತ್ತಿರುವುದರಿಂದ ಪ್ರತಿಯೊಬ್ಬರು ಸಂಸ್ಕೃತದಲ್ಲಿಯೇ ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಈ ಗ್ರಾಮ ಸಂಸ್ಕೃತ ಭಾಷೆ ಮಾತನಾಡುವ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದೆ.ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿ, ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಶಿಕ್ಷಣ, ಅನ್ನದಾಸೋಹ, ಸಂಸ್ಕೃತಿ, ಉತ್ತಮ ವಿಚಾರಧಾರೆ, ಭಕ್ತಿ ಭಂಡಾರಗಳನ್ನು ಸಾರುತ್ತ ಮಠಗಳ ಚಾರಿತ್ರ್ಯವನ್ನು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಹಲವು ಮಠಾಧೀಶರು ಕೂಡಾ ಕಾರ್ಯ ಮಾಡಿದ್ದಾರೆ. ಅದರಂತೆ ಇಲ್ಲಿನ ಗ್ರಾಮವೊಂದು ಸಂಸ್ಕೃತ ಭಾಷೆಯಿಂದಲೇ ಪ್ರಸಿದ್ಧಿ ಹೊಂದಿದೆ.

ಪ್ರತಿದಿನ ಐದು ಗಂಟೆಯಿಂದ ಎಂಟು ಗಂಟೆವರೆಗೆ ಮಕ್ಕಳು ಸಂಸ್ಕೃತ ಭಾಷೆ ಕಲಿಯುತ್ತಿದ್ದು, ಸಂಸ್ಕೃತ ಕಲಿಸುವುದಕ್ಕೆ ರಾಜ್ಯದ ವಿವಿಧ ಮೂಲಗಳಿಂದ ಶಿಕ್ಷಕರು ಕೂಡ ಆಗಮಿಸಿ, ಮಕ್ಕಳಿಗೆ ದೇವಲಿಪಿ ಭಾಷೆಯಲ್ಲಿ ಬೋಧನೆ ಮಾಡುತ್ತಿದ್ದಾರೆ. ಅತಿ ಉಸ್ತುಕತೆಯಿಂದ ಮಕ್ಕಳು ಸಂಸ್ಕೃತ ಕಲಿಯುತ್ತಿದ್ದು, ಗ್ರಾಮಸ್ಥರು ಕೂಡ ಇದು ಹೆಮ್ಮೆಯ ವಿಚಾರವಾಗಿದೆ ಎಂದು ಸಂಸ್ಕೃತ ಭಾಷೆಯಲ್ಲಿ ಹೇಳುತ್ತಾರೆ.ದುಂಡೇಶ್ವರ ಮಹಾಸ್ವಾಮಿ ಶ್ರೀಗಳ ಗುರುಗಳಾದ ಲಿಂಗೈಕ್ಯ ಪರಮಪೂಜ್ಯ ಶೋತ್ರಿಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಂತೆ, ನಂದೇಶ್ವರ ಗ್ರಾಮದಲ್ಲಿ ಪರಂಪರೆಯಿಂದ ಬಂದಿರುವ ಮಠದಲ್ಲಿ ಮಠಾಧೀಶರಾಗಿ ಮುಂದುವರೆದು, ಸದ್ಯ ಗ್ರಾಮದಲ್ಲಿ ಶಿಕ್ಷಣ ಜೊತೆಗೆ ಸಂಸ್ಕೃತ ಭಾಷೆ ಎಂಬ ಕ್ರಾಂತಿಯನ್ನು ಮೊಳಗಿಸಿದ್ದಾರೆ.

ಸಂತಸ ತಂದ ಸಂಸ್ಕೃತ ಅಧ್ಯಯನ: ”ಸಂಸ್ಕೃತವನ್ನು ಶೃಂಗೇರಿ, ಕಾಶಿ, ಜಮ್ಮು ಕಾಶ್ಮೀರ, ಮೈಸೂರು ವಿಶ್ವವಿದ್ಯಾಲಯದಂತಹ ದೂರ ದೂರದ ಊರಿನಲ್ಲಿ ಕಲಿಯುವುದು ಅನಿವಾರ್ಯವಾಗಿತ್ತು. ಆದರೆ, ನಮ್ಮಂತ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನಂದೇಶ್ವರ ಶ್ರೀಗಳು ಸತತ ಪರಿಶ್ರಮದಿಂದ ಸಂಸ್ಕೃತದಲ್ಲಿ ಬೋಧನೆ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಪ್ರಥಮ, ಸಾಹಿತ್ಯ, ವೇದ, ಸಂಗೀತ ಎಲ್ಲವನ್ನೂ ಕಲಿಸಲಾಗುತ್ತಿದೆ. ಅಲ್ಲದೇ ಕಾಶಿಯಲ್ಲಿ ದೊರೆಯುವ ಸಂಸ್ಕೃತ ಶಿಕ್ಷಣ ಇದೇ ಗ್ರಾಮದಲ್ಲಿ ದೊರೆಯಲು ಸಾಧ್ಯವಾಗುತ್ತಿದೆ. ನಾವು ಸರಾಗವಾಗಿ ಮಂತ್ರ ಪಠಣಗಳನ್ನ ಉಚ್ಚಾರ ಮಾಡುತ್ತಿದ್ದೇವೆ. ಈ ವಿದ್ಯಾಭ್ಯಾಸ ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ನಮ್ಮ ಗ್ರಾಮದಲ್ಲಿ ಮತ್ತು ಹೊರಗಡೆ ತುಂಬಾ ಗೌರವ ಕೊಡುತ್ತಾರೆ. ಈ ಭಾಷೆಯನ್ನು ಕಲಿತು ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರಿಂದ ಎಲ್ಲರೂ ಸಂಸ್ಕೃತ ಭಾಷೆ ಕಲಿತರೆ ಒಳಿತು” ಎಂದು ಸಂಸ್ಕೃತ ಭಾಷೆ ಕಲಿಯುತ್ತಿರುವ ವಿದ್ಯಾರ್ಥಿ ಸುನೀಲ್ ಮೋಪಾಗರ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಪುಟ್ಟ ಗ್ರಾಮದಲ್ಲಿ ಸಂಸ್ಕೃತದ ಕಲರವ: ”ನಂದೀಶ್ವರ ಗ್ರಾಮ ಎಂಬುದು ಒಂದು ಪುಟ್ಟ ಗ್ರಾಮ. ಆದರೆ, ಇಂಥ ಮಠಾಧೀಶರುಗಳಿಂದ ಈ ಗ್ರಾಮ ಸ್ವರ್ಗ ಲೋಕದಂತೆ ಭಾಸವಾಗುತ್ತಿದೆ. ನಾನು ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ಮಠಾಧೀಶರ ಸಮಾಜಮುಖಿ ಕಾರ್ಯದಿಂದ ಪ್ರೇರಣೆಗೊಂಡು ನನ್ನ ರಜೆ ದಿನಗಳನ್ನು ಈ ಮಠದ ಸೇವಕನಾಗಿ ಕಾಯಕ ಮಾಡುತ್ತಿದ್ದ. ನಾನು ಸಂಸ್ಕೃತ ಭಾಷೆ ಕಲಿತು ಎಲ್ಲರಿಗೂ ಬೋಧನೆ ಮಾಡುತ್ತಿದ್ದೇನೆ. ನಮ್ಮ ಮನೆಯಲ್ಲೂ ಕೂಡ ಸಂಸ್ಕೃತ ಭಾಷೆ ಮಾತನಾಡುವ ರೂಢಿ ಇಟ್ಟುಕೊಂಡಿದ್ದೇವೆ. ಮೂರು ವಿದ್ಯಾರ್ಥಿಗಳಿಂದ ಮೂರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದ್ಯಕ್ಕೆ ಉಚಿತವಾಗಿ ಸಂಸ್ಕೃತ ಭಾಷೆ ಕಲಿಯುತ್ತಿದ್ದಾರೆ” ಎನ್ನುತ್ತಾರೆ ಚಿಕ್ಕಬಳ್ಳಾಪುರ ಶಿಕ್ಷಕ ಮಂಜುನಾಥ್ ಜಿ ಟಿ.

ಕಷ್ಟಗಳು ದೂರ: ”ಸನಾತನ ಧರ್ಮ, ಸಂಸ್ಕೃತಿ, ಸಂಸ್ಕೃತ ಭಾಷೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶ್ರೀಮಠದಲ್ಲಿ ನಿರಂತರವಾಗಿ ಪ್ರತಿದಿನ ಸಾಯಂಕಾಲ ಉಚಿತ ಸಂಸ್ಕೃತ ತರಗತಿಗಳು ನಡೆದುಕೊಂಡು ಹೋಗುತ್ತಿವೆ. ಸಂಸ್ಕೃತ ಕಲಿಯುವ ಆಸಕ್ತಿ ಇರುವ ಪ್ರತಿಯೊಬ್ಬರು ತರಗತಿಗಳಿಗೆ ಹಾಜರಾಗಿ ಕಲಿಯಬಹುದಾಗಿದೆ. ಸಂಸ್ಕೃತ ವೇದ ಮಂತ್ರಗಳಲ್ಲಿ ವಿಶೇಷವಾದ ಶಕ್ತಿಯಿದೆ. ಶ್ಲೋಕ ಮಂತ್ರಗಳನ್ನು ಹೇಳುವುದರಿಂದ ಬಂದ ಕಷ್ಟಗಳು ದೂರವಾಗುತ್ತವೆ. ಸಂಸ್ಕೃತ ಭಾಷೆಯ ಜ್ಞಾನ ಹೊಂದಿದವರಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ” ಎಂದು ದುಂಡೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ನಂದೇಶ್ವರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆ ಹೇಳಿಕೊಡುತ್ತಿರುವ ಶಿಕ್ಷಕಿ ಶ್ರೀಮತಿ ಆರತಿ ಖೋತ ಮಾತನಾಡಿ, ”ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಇಂತಹದ್ದೊಂದು ಶಾಲೆಯನ್ನ ನಾವು ನೋಡಲು ಅಸಾಧ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಇಂಥದೊಂದು ಶಾಲೆ ಅಪರೂಪವಾಗಿದೆ. ಸಂಸ್ಕೃತ ಕಲಿಯುವ ಮಕ್ಕಳಿಗೆ ಒಳ್ಳೆಯ ವಾತಾವರಣ ರೂಪಿಸಿದೆ. ಸಂಸ್ಕೃತ ಭಾಷೆಯನ್ನು ಕೇಳುವುದರಿಂದ ಹಾಗೂ ಮಾತನಾಡುವುದರಿಂದ ಎಂಥಹ ಜಟಿಲವಾದ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ. ಗ್ರಾಮೀಣ ಭಾಗದ ಜನರು ಕೂಡ ಸದ್ಯ ಸಂಸ್ಕೃತದಲ್ಲಿ ಮಾತನಾಡುತ್ತಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದಿದ್ದಾರೆ.