ಬೆಳ್ಮಣ್: ತುಳುನಾಡಿ ನಾದ್ಯಂತ ನೆಲೆಗೊಂಡಿರುವ ಸಕಲ ಸಿರಿ ಕ್ಷೇತ್ರಗಳಿಗೆ ಪುರಾತನ ಮತ್ತು ಮಿಗಿಲೆನಿ ಸಿರುವ ಸತ್ಯದ ಸಿರಿಗಳ ಪುಣ್ಯಕ್ಷೇತ್ರ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಳದ ಸನ್ನಿಧಾನದಲ್ಲಿ ಸಿರಿ ಜಾತ್ರೆ ಮಾ. 21ರಂದು ಸಡಗರದಿಂದ ನಡೆಯಲಿದೆ. ತುಳುನಾಡು, ಮಲೆನಾಡು, ಕರ್ನಾಟಕದಾದ್ಯಂತ ಮಹಾರಾಷ್ಟ್ರದಂತಹ ಹೊರನಾಡುಗಳಿಂದ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಭಕ್ತರ ಸೇವೆಗಾಗಿ ಸಮಗ್ರ ನಂದಳಿಕೆ ತಯಾರಾಗಿದೆ.
ಮಾ. 21ರಂದು ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ರಜತ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣಿಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿಮಡಲುಚಪ್ಪರ ಕಟ್ಟೆಪೂಜಾ ಸೇವೆ ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ರಿಂದ 8ರ ವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ರಾತ್ರಿ 9.30ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಸುಂದರರಾಮ ಹೆಗ್ಡೆ ಅವರ ಆಗಮನದ ಪರಂಪರಾಗತ ಅದ್ಧೂರಿಯ ಮೆರವಣಿಗೆ ನಡೆಯಲಿದೆ. ರಾತ್ರಿ 10.30ರಿಂದ ಆಯನೋತ್ಸವ ಬಲಿ, ವೈಭವೋಪೇತ ಕೆರೆದೀಪೋತ್ಸವ, ‘ಶ್ರೀ ಕೆರೆದೀಪ ಕಟ್ಟೆಪೂಜಾ ಮಹೋತ್ಸವ’ ಸಂಪನ್ನಗೊಳ್ಳಲಿದ್ದು, ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ-ದಾರಗ ದರ್ಶನಾವೇಶಾಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ ಪ್ರಾಚೀನ ವಿಧಿ ವೈಭವಗಳು ನಡೆಯಲಿವೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.