ನಾಲ್ಕು ಮುದ್ದು ಮರಿಗಳಿಗೆ ಜನ್ಮವಿತ್ತ ನಮೀಬಿಯಾ ಚಿರತೆ ಜ್ವಾಲಾ; ಮೂರು ಮರಿಗಳ ತಾಯಿಯಾದ ಆಶಾ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜನವರಿ 24 ರಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರದಂದು ಚಿರತೆಯು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಸಚಿವರು ಹೇಳಿದ್ದರು.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಂಚೂಣಿ ವನ್ಯಜೀವಿ ಯೋಧರು ‘ಜ್ವಾಲಾ’ ಚಿರತೆಯ ಅತಿ ಹತ್ತಿರ ಹೋಗಿ ನೋಡಿದಾಗ ನಾಲ್ಕು ಮರಿಗಳಿರುವುದು ಕಂಡುಬಂದಿದೆ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಪ್ರಕಾರ, ಜನವರಿ 20 ರಂದು ಜ್ವಾಲಾಗೆ ಮರಿಗಳು ಜನಿಸಿದವು. 10 ತಿಂಗಳ ಅಂತರದ ನಂತರ ಇದು ಜ್ವಾಲಾ ಚಿರತೆಯ ಎರಡನೆ ಹೆರಿಗೆಯಾಗಿದೆ. ಜ್ವಾಲಾ (ನಮೀಬಿಯಾದ ಹೆಸರು ಸಿಯಾಯಾ) ಕಳೆದ ಮಾರ್ಚ್‌ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ ಮೂರು ಮರಿಗಳು ತೀವ್ರಶಾಖಕ್ಕೆ ಬಲಿಯಾಗಿದ್ದು ಒಂದನ್ನು ಮಾನವ ಆರೈಕೆಯಲ್ಲಿ ಬೆಳೆಸಲಾಗುತ್ತಿದೆ.

ಜನವರಿ 3 ರಂದು ನಮೀಬಿಯಾದ ಮತ್ತೊಂದು ಚಿರತೆ ‘ಆಶಾ’ಗೆ ಮೂರು ಮರಿಗಳು ಹುಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು.

ಕುನೋ ಉದ್ಯಾನದಲ್ಲಿ ಈಗ ಮರಿಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ಈ ತಿಂಗಳೊಂದರಲ್ಲೇ ಏಳು ಮರಿಗಳು ಜನಿಸಿವೆ.

ಕಳೆದ ವರ್ಷ ಮಾರ್ಚ್ ನಿಂದ ಇದುವರೆಗೆ ಏಳು ವಯಸ್ಕ ಚಿರತೆಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ.