ಕುಂದಾಪುರ : ಅನರ್ಹ ಶಾಸಕರು ರಾಜಿನಾಮೆ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನುವ ಧ್ವನಿ ಸುರುಳಿಯನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ನೀಡೋದರಿಂದ ನ್ಯಾಯಾಲಯದಲ್ಲಿ ಇರುವ ಅನರ್ಹತೆಯ ಕುರಿತಾದ ಪ್ರಕರಣಕ್ಕೆ ಯಾವುದೆ ರೀತಿಯ ಹಿನ್ನಡೆಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಒಂದು ವ್ಯವಸ್ಥೆಯಡಿಯಲ್ಲಿ ರಾಜ್ಯ ಸರ್ಕಾರ ರಚನೆಯಾಗಿರುವುದರಿಂದ ಹಾಗೂ ಬಿಜೆಪಿಯಲ್ಲಿ ಶಾಸಕರ ಸಂಖ್ಯಾ ಬಲದ ಕೊರತೆ ಇರುವುದರಿಂದಾಗಿ ಪಕ್ಷದ ಎಲ್ಲ ಹಿರಯರಿಗೆ ಹಾಗೂ ಎಲ್ಲಾ ಭಾಗಗಳಿಗೂ ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ನ್ಯಾಯ ಕೊಡಲು ಆಗಲಿಲ್ಲ, ಆದರೆ ಮುಂದಿನ ದಿನಗಳಲ್ಲಿ ಅವಕಾಶ ವಂಚಿತರಿಗೆ ಪಕ್ಷ ಅವಕಾಶ ಕೊಡಲಿದೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪಕ್ಷ ನಿಷ್ಠರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪಗಳು ಇರುವುದು ಸಹಜ, ಎಲ್ಲಿಯೂ ಕೂಡ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎನ್ನುವ ಕೂಗು ಎಲ್ಲ ಒಂದಷ್ಟು ಜನರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕಟೀಲ್ ಸ್ವಷ್ಟಪಡಿಸಿದರು.
ಸರ್ಕಾರದ ನಿಗಮ ಮಂಡಳಿ ಹಾಗೂ ಇತರ ನೇಮಕಾತಿಗಳಲ್ಲಿ ಪಕ್ಷಕ್ಕಾಗಿ ದುಡಿದಿರುವ ಹಿರಿಯರನ್ನು ಪರಿಗಣಿಸಬೇಕು ಎನ್ನುವ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷ ನಿಷ್ಠರಿಗೆ ಹಾಗೂ ಹಿರಿಯರಿಗೆ ಅವಕಾಶ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಉಪ ಚುನಾವಣೆ ಘೋಷಣೆಯಾಗಿರುವ ಕ್ಷೇತ್ರದಲ್ಲಿನ ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪು ಬಂದ ಬಳಿಕ ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಯೋಚನೆಗಳು ಆಗುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಕೊಲ್ಲೂರಿಗೆ ಆಗಮಿಸಿದ್ದ ನಳೀನ್‌ಕುಮಾರ ಕಟೀಲ್ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್‌ಕುಮಾರ ಎಂ. ಶೆಟ್ಟಿ ಹಾಗೂ ಕಾರ್ಯನಿರ್ವನಿರ್ವಣಾಕಾರಿ ಅರವಿಂದ ಸುತ್ತುಗುಂಡಿ, ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡ ದೇವಳದ ವತಿಯಿಂದ ಗೌರವಿಸಿದರು.
ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಕ್ಷಿಣ ಜಿಲ್ಲಾ ಬಿಜೆಪಿ ಪ್ರಭಾರಿ ಉದಯಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಕೆ.ಬಾಬು ಶೆಟ್ಟಿ ತಗ್ಗರ್ಸೆ ಇದ್ದರು. ಕೊಲ್ಲೂರಿನಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಅಲ್ಲಿಂದ ಮಂಗಳೂರಿಗೆ ತೆರಳಿದರು.