ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ತೆಗೆದುಕೊಂಡಿರುವ ನಳಿನ್ ಕುಮಾರ್ ಕಟೀಲ್ ಸೋಮವಾರದಂದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭವಿಷ್ಯ ಅನಿಶ್ಚಿತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂರು ಬಾರಿ ಸಂಸದರಾಗಿರುವ ಕಟೀಲ್ 2019ರ ಆಗಸ್ಟ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಸ್ಥಾನಕ್ಕೆ ಹಲವು ಸ್ಪರ್ಧಿಗಳಿದ್ದಾಗ್ಯೂ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರ ಜೊತೆಗಿನ ಸಾಮೀಪ್ಯವೇ ಇದಕ್ಕೆ ಕಾರಣ ಎಂದು ರಾಜಕೀಯ ಪಡಸಾಲೆಯಲ್ಲಿ ಹೇಳಲಾಗುತ್ತದೆ.
ಬಿಜೆಪಿ ಅಧ್ಯಕ್ಷರಾಗಿ ಅವರ ಮೂರು ವರ್ಷಗಳ ಅವಧಿ ಕಳೆದ ವರ್ಷ ಕೊನೆಗೊಂಡಿದ್ದರೂ, ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವು ಅವರ ಕಾಲಾವಧಿಯನ್ನು ವಿಸ್ತರಿಸಿತ್ತು. ಇದೀಗ ಚುನಾವಣೆ ಮುಗಿದಿದ್ದು, ಮತ್ತು ಪಕ್ಷವು ಭಾರೀ ಹಿನ್ನಡೆಯನ್ನು ಅನುಭವಿಸಿದ್ದು ಹಾಗೂ ಅಧ್ಯಕ್ಷ ಸ್ಥಾನದ ಕಾಲಾವಧಿಯೂ ಮುಗಿದಿರುವುದರಿಂದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಸಲ್ಲಿಸಬೇಕಾಗಬಹುದು ಎನ್ನಲಾಗಿದೆ.
ನಳಿನ್ ಕುಮಾರ್ ಕಟೀಲ್ ಸೋಮವಾರ ತನ್ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ವರದಿಗಳಾಗಿವೆ.