ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ನಾನು ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು.
ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಟೀಲ್, ನನ್ನ ಅವಧಿ ಮುಕ್ತಾಯವಾಗಿದೆ. ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನೈತಿಕವಾಗಿ ನಾನು ವಿಧಾನಸಭಾ ಚುನಾವಣೆಯ ಸೋಲಿನ ಜವಾಬ್ದಾರಿ ಹೊತ್ತಿದ್ದೇನೆ. ಜವಾಬ್ದಾರಿ ಹೊತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ. ಮೌಖಿಕವಾಗಿಯೂ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.
ಆದರೆ ಇದೀಗ ತಾನು ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ರಾಜೀನಾಮೆಯ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಈ ಬಗ್ಗೆ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ ಕಟೀಲ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು. ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ಹೇಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.