ಬೆಂಗಳೂರು: ಕರ್ನಾಟಕದ ಮುಂದಿನ ಗೆಲುವು ದಕ್ಷಿಣ ಭಾರತಕ್ಕೇ ಒಂದು ಸಂದೇಶ ನೀಡಲಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್ ಸೀಟು ಪಡೆಯುವ ಚಿಂತನೆ ಯಶಸ್ಸು ಪಡೆಯಲಿದೆ. ಯಡಿಯೂರಪ್ಪ ಅವರು ರೈತ ಬಂಧುವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದೆ, ಬೆಳಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೊಸಪೇಟೆಯ ಸಂಕಲ್ಪ ಸಭೆಯು ಅಸೆಂಬ್ಲಿ ಚುನಾವಣೆಯಲ್ಲಿ ವಿಜಯವನ್ನು ತಂದು ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಕುರಿತು ವಿಶ್ವದೆಲ್ಲೆಡೆ ಗೌರವ ಪ್ರಾಪ್ತಿಯಾಗುತ್ತಿದೆ. ಇದಕ್ಕೆ ಮಹಾನ್ ಪುರುಷ ನರೇಂದ್ರ ಮೋದಿ ಅವರು ಕಾರಣಕರ್ತರು. ಉಕ್ರೇನ್‍ನಿಂದ ಸಾವಿರಾರು ಭಾರತೀಯರನ್ನು ಕರೆ ತಂದು ನಮ್ಮ ಗೌರವ ಹೆಚ್ಚಿಸಿಕೊಂಡಿದ್ದೇವೆ. ಅರ್ಹ ಮಹಾಲಿಂಗ ನಾಯ್ಕ, ಹಾಜಬ್ಬರಿಗೆ ಪದ್ಮಶ್ರೀ ಲಭಿಸುತ್ತಿದೆ. ಸಾಂಸ್ಕೃತಿಕ ಪರಿವರ್ತನೆಯು ಜಗದ್ವಂದ್ಯ ಭಾರತ ನಿರ್ಮಾಣಕ್ಕೆ ಮೋದಿ ಅವರ ನೇತೃತ್ವದ ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ಮೋದಿ ಅವರ ಸರಕಾರದ ಏಳೂವರೆ ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಳಂಕವಿಲ್ಲ. ಮುದ್ರಾ, ಜನಧನ್ ಸೇರಿದಂತೆ ಎಲ್ಲಿಯೂ ಭ್ರಷ್ಟಾಚಾರ ಇಲ್ಲ. ಒಂದೇ ಒಂದು ರೂಪಾಯಿ ಸೋರಿಕೆ ಆಗಿಲ್ಲ. ಕಿಸಾನ್ ಸಮ್ಮಾನ್ ಯೋಜನೆ ರೈತರನ್ನು ನೇರವಾಗಿ ತಲುಪುತ್ತಿದೆ. ಆಡಳಿತದಲ್ಲಿ ಪರಿವರ್ತನೆ ಸಾಧ್ಯವಾಗುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮೋದಿಯವರ ಕರೆಗೆ ವಿಶೇಷ ಜನ ಸ್ಪಂದನೆ ವ್ಯಕ್ತವಾಗಿತ್ತು ಎಂದ ಅವರು, ಜನರು ಜಾತಿ, ಮತ, ಪಂಥ ಮರೆತು ಮೋದಿಯವರ ಕರೆಗಳಿಗೆ ಸ್ಪಂದಿಸಿದರು ಎಂದು ನುಡಿದರು.
ಹಿಂದೆ ಪೋಲಿಯೋ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಕಾಂಗ್ರೆಸ್ ಸರಿಯಾಗಿ ಸ್ಪಂದಿಸಲಿಲ್ಲ. ಆದರೆ, ಬಿಜೆಪಿ ಸರಕಾರವು ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ ಎಂದು ವಿವರಿಸಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕವು ಸ್ವಾಭಿಮಾನಿ ಕರ್ನಾಟಕವಾಗಿ ಪರಿವರ್ತನೆ ಹೊಂದುತ್ತಿದೆ. ರೈತವಿದ್ಯಾ ನಿಧಿ ಪರಿಕಲ್ಪನೆ ಜಾರಿ ಆಗಿದೆ. ವಿವಿಧ ಮಾಸಾಶನ ಹೆಚ್ಚಳ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಯೋಜನೆಗಳು ಜಾರಿಗೊಳ್ಳುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.
ಕರ್ನಾಟಕ ಸರಕಾರವು ಅಭಿವೃದ್ಧಿ ಪಥದಲ್ಲಿದೆ. ಭ್ರಷ್ಟಾಚಾರದ ಆರೋಪ ಮಾಡುವ ಕಾಂಗ್ರೆಸ್ಸಿಗರಿಗೆ ಉತ್ತರ ಕೊಡಬೇಕು. ಅರ್ಕಾವತಿ ಯೋಜನೆ ಪರಿಶೀಲಿಸಿ ಕ್ರಮ ಕೈಗೊಂಡರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣೆ ಸಂಬಂಧಿಸಿದ ಕಾರ್ಯಗಳಿಗೆ ಕಾರ್ಯಕರ್ತರೇ ಸಿಗುತ್ತಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಹೆಸರಿನಲ್ಲೇ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಅಭಿವೃದ್ಧಿ ಕಾಮಗಾರಿಗಳನ್ನು ಜನರ ಮುಂದಿಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಭೆಯನ್ನು ಉದ್ಘಾಟಿಸಿದರು. ರಾಷ್ಟ್ರ ಮತ್ತು ರಾಜ್ಯದ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಆಹ್ವಾನಿತರು ಭಾಗವಹಿಸಿದ್ದರು.