ನಾಗರಿಕ ಸಮಿತಿಯಿಂದ ಜಾನುವಾರು ಪಕ್ಷಿಗಳಿಗೆ ನೀರುಣಿಸಲು “ಕಲ್ಲ್ ಮರ್ಗಿ” ವ್ಯವಸ್ಥೆ

ಉಡುಪಿ: ವಾತಾವರಣದಲ್ಲಿ ಸುಡು ಬಿಸಿಲ ಧಗೆ ಏರಿಕೆ ಕಂಡು ಬಂದಿದೆ. ಪರಿಸರದ ಬಾವಿ ಹಳ್ಳ ಕೊಳಗಳು ಬತ್ತಲಾರಂಬಿಸಿವೆ. ಜಾನುವಾರು, ಬೀದಿನಾಯಿ, ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜೀವ ಸಂಕುಲಗಳಿಗೆ  ನೀರುಣಿಸುವ ಸಲುವಾಗಿ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ  ಮುಂಬಾಗದ ಆಯಾಕಟ್ಟಿನ ಸ್ಥಳದಲ್ಲಿ  (ಕಲ್ಲ್ ಮರಾಯಿ) ಕಲ್ಲ್ ಮರ್ಗಿ ಇಟ್ಟು, ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿದೆ.
ಈ ಕಲ್ಲು ಮರ್ಗಿಯು 150 ವರ್ಷಗಳ ಹಳೆಯದಾಗಿದ್ದು, ಈ ಕಲ್ಲು ಮರ್ಗಿ ಭಂಡಾರಿಗದ್ದೆ ದಿ.ಎಲ್ಲು ಭಂಡಾರಿ ಅವರಿಗೆ ಸೇರಿದ್ದಾಗಿದೆ. ಅವರು ನೂರು ವರ್ಷಗಳ ಹಿಂದೆ ಸಂಸ್ಕ್ರತ ಕಾಲೇಜಿನ ಸನಿಹ ಜಾನುವಾರುಗಳಿಗೆ ನೀರು ಕುಡಿಯಲು ಇಡುತ್ತಿದ್ದರಂತೆ. ಅವರು ಕಾಲವಾದನಂತರ ಲಿಂಗು ಭಂಡಾರಿ ನೀರಿಡುವ ಸಂಪ್ರದಾಯ ಮುಂದುವರಿಸಿದ್ದರು. ನಂತರ  ನೀರಿಡುವ ಸಂಪ್ರದಾಯ ಸ್ಥಗಿತಗೊಂಡಿತ್ತು.
ಕಲ್ಲು ಮರ್ಗಿಯು ಭಂಡಾರಿ ಕುಟುಂಬದ  ಬಾಲಕೃಷ್ಣ ಭಂಡಾರಿ ಅವರ ಮನೆಯಲ್ಲಿ ರಕ್ಷಿಸಿಡಲಾಗಿತ್ತು. ಈ ಬಗ್ಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಮನೆಯವರಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸಲು ಕಲ್ಲು ಮರ್ಗಿ ನೀಡುವಂತೆ ಕೇಳಿಕೊಂಡರು. ಸ್ಥಗಿತಗೊಂಡ ಸೇವಾ ಸಂಪ್ರಾದಯಕ್ಕೆ ಮರುಜೀವ ನೀಡುವುದಾಗಿ ಹೇಳಿದರು. ಭಂಡಾರಿ ಮನೆಯವರು ಸಮಿತಿಯ ಯೋಜನೆಗೆ ಸಮ್ಮತಿಸಿ ಕಲ್ಲು ಮರ್ಗಿಯನ್ನು ನೀಡಿದರು.
ಸಮಿತಿಯ ವತಿಯಿಂದ ಏ.2 ರಂದು, ರಾಘವೇಂದ್ರ ಮಠದ ಗೋಶಾಲೆಯ ಬಸವನಿಗೆ ಕಲ್ಲ್ ಮರ್ಗಿಯ ನೀರುಣಿಸುವ ಮೂಲಕ ಕಲ್ಲ್ ಮರ್ಗಿ ಜಾನುವಾರು ಪಕ್ಷಿಗಳಿಗೆ ನೀರುಣಿಸಲು ಅನಾವರಣ ಮಾಡಲಾಯಿತು. ಏಕಶಿಲೆಯಲ್ಲಿ ರಚಿತವಾದ ಕಲ್ಲ್ ಮರ್ಗಿಯಲ್ಲಿ ಐದು ಕೊಡಪಾನ ನೀರು ಹಿಡಿಯುತ್ತದೆ. ಪುರಾತನ ಕಾಲದ ನೀರಿಡುವ ಸಾಧನ ಇದಾದರಿಂದ ರಥಬೀದಿಯಲ್ಲಿ  ಕಲ್ಲ್ ಮರ್ಗಿಯು ಯಾತ್ರಿಕರ ಗಮನ ಸೆಳೆಯುತ್ತಿದೆ. ಅನಾವರಣ ಕಾರ್ಯಕ್ರಮದಲ್ಲಿ  ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಡೇವಿಡ್, ಹಾಗೂ ನಜೀರ್, ಮೋಹನ, ಕಿಶೋರ್ ಕುಮಾರ್ ಕರ್ನಪಾಡಿ, ಕಾರ್ತೀಕ್, ಮೋಹನ್ ದೇಶಪಾಂಡೆ ಉಪಸ್ಥಿತರಿದ್ದರು.