ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಪ್ರಿಲ್ 3ರಂದು ನಾಗ ತನು ತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ. ಆ ಪ್ರಯುಕ್ತ ಕ್ಷೇತ್ರದ ನಾಗಾಲಯದಲ್ಲಿ ಬೆಳಿಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾ ಅಭಿಷೇಕ, ಸುಬ್ರಹ್ಮಣ್ಯ ದೇವರಿಗೆ ಪವಮಾನ ಕಲಶಾಭಿಷೇಕ, ಪ್ರಸನ್ನ ಪೂಜೆ
ಮಹಾಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿರುವುದು.
ಸಮಸ್ತ ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ್ತ ಪೂರ್ವಕವಾಗಿ ನೆರವೇರಲಿರುವ ಈ ಪೂಜೆಯು ಮುಂಬೈಯ ಗುರುಪ್ರೀತ್ ಕೌರ್ ರವರ ಬಾಬ್ತು ಸಂಪನ್ನಗೊಳ್ಳಲಿದೆ. ಬೆಳಿಗ್ಗೆಯಿಂದಲೇ ಪಂಚವರ್ಣಾತ್ಮಕವಾದ ಮಂಡಲ ರಚನೆಯು ಆರಂಭಗೊಳ್ಳಲಿದ್ದು, ನಾಗ ತನು ತರ್ಪಣ ಮಂಡಲ ಪೂಜೆಯು ಸಂಜೆ ಗಂಟೆ 5 ರಿಂದ ಆರಂಭಗೊಳ್ಳಲಿರುವುದು. ರಾತ್ರಿ ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕಾ ಆರಾಧನೆಗಳು, ಅನ್ನಸಂತರ್ಪಣೆ ಹಾಗೂ ನಾಗ ಸಂದರ್ಶನ ಸೇವೆಯು ಕಲ್ಲಂಗಳ ರಾಮಚಂದ್ರ ಕುಂಜಿತಾಯ ಅವರಿಂದ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.