ಕಾರ್ಕಳ ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ‘ಎ’ ಗ್ರೇಡ್ ಮಾನ್ಯತೆ

ಕಾರ್ಕಳ: ದೇಶದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ಯಿಂದ ಎಂ.ಪಿ.ಎಂ ಸ.ಪ್ರ.ದ ಕಾಲೇಜಿನಲ್ಲಿ ಫೆಬ್ರವರಿ 1 ಮತ್ತು 2 ರಂದು ಸಮಗ್ರ ಮೌಲ್ಯಮಾಪನವು ನಡೆದು ಕಾಲೇಜಿಗೆ ‘ಎ’ ಗ್ರೇಡ್ ಮಾನ್ಯತೆ ಲಭಿಸಿರುತ್ತದೆ. ಒಟ್ಟು ಸಿಜಿಪಿಎ 4 ರಲ್ಲಿ 3.21 ಅಂಕಗಳನ್ನು ಪಡೆದ ಈ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗ್ರ ಸ್ಥಾನಿಯಾಗಿರುತ್ತದೆ.

ನ್ಯಾಕ್ ತಂಡದಲ್ಲಿ ಖ್ಯಾತ ಶಿಕ್ಷಣ ತಜ್ಞ, ಹಿಮಾಚಲ ಪ್ರದೇಶದ ಮಹಾರಾಜ ಅಗ್ರಸೇನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ರಾಕೇಶ್ ಗುಪ್ತಾ ಅವರ ನೇತೃತ್ವದಲ್ಲಿ ಬನಾರಸ್ ಹಿಂದು ಯುನಿವರ್ಸಿಟಿ, ಉತ್ತರ ಪ್ರದೇಶದ ಪ್ರಾಧ್ಯಾಪಕ ಪ್ರೊ. ಡಾ. ಮನೋಜ್ ಕುಮಾರ್ ಸಿಂಗ್ ಹಾಗೂ ಡಿ.ಎ.ವಿ ಪಿ.ಜಿ ಕಾಲೇಜು ಡೆಹ್ರಾಡೂನ್‌ ಪ್ರಾಧ್ಯಾಪಕ ಡಾ. ಅಜಯ್ ಸಕ್ಸೇನ ಇವರು 2 ದಿನಗಳ ಕಾಲ ಕಾಲೇಜಿನ ಮೌಲ್ಯಮಾಪನವನ್ನು ನಡೆಸಿದರು. ಈ ಪ್ರಕ್ರಿಯೆಯಲ್ಲಿ ಪಠ್ಯಕ್ರಮದ ಅಂಶಗಳು, ಭೋದನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋದನೆ, ನಾವೀನ್ಯತೆ ಮತ್ತು ವಿಸ್ತರಣಾ ಚಟುವಟಿಕೆಗಳು, ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ, ಕಾಲೇಜಿನ ಆಡಳಿತ ವ್ಯವಸ್ಥೆ, ಶೈಕ್ಷಣಿಕ ಗುಣಮಟ್ಟ ಮತ್ತು ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕಾಲೇಜಿನ ಶ್ರೇಣಿಯನ್ನು ನಿರ್ಧರಿಸಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ ಹಾಗೂ ನ್ಯಾಕ್ ಸಂಚಾಲಕಿ ಸುಷ್ಮಾ ರಾವ್ ಕೆ ಇವರ ನೇತೃತ್ವದಲ್ಲಿ ಅಧ್ಯಾಪಕರ ತಂಡವು ನ್ಯಾಕ್ ಸಮಿತಿ ಮುಂದೆ ಅಗತ್ಯದ ದಾಖಲೆಗಳನ್ನು ಪ್ರಸ್ತುತ ಪಡಿಸಿದೆ. ಇದರೊಂದಿಗೆ ಕಾಲೇಜಿನ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾಗಿರುವ ಕಾಲೇಜು ಅಭಿವೃದ್ದಿ ಸಮಿತಿ, ಪೋಷಕರ ವೇದಿಕೆ, ಹಳೆ ವಿದ್ಯಾರ್ಥಿ ಸಂಘ ಹಾಗೂ ಪ್ರಸ್ತುತ ಅಧ್ಯಯನದಲ್ಲಿರುವ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಲು ಸಂವಾದವನ್ನು ನಡೆಸಿದೆ.

ಕಾಲೇಜಿನ ಈ ಉನ್ನತ ಸಾಧನೆಗೆ ಕಾರಣೀಭೂತರಾದ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹಾಗೂ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹಾಗೂ ಸದಸ್ಯರುಗಳು, ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಎಂ, ಕಾಲೇಜಿನ ಈ ಹಿಂದಿನ ಐಕ್ಯೂಎಸಿ ಸಂಚಾಲಕಿ ಶ್ರೀಮತಿ ಜ್ಯೋತಿ ಎಲ್ ಜನ್ನೆ, ಪೋಷಕರ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಆಭಾರಿಯಾಗಿದ್ದು, ಕಾಲೇಜಿನ ಸಮಗ್ರ ಅಭಿವೃದ್ದಿಗೆ ಮೂಲ ಕಾರಣರಾಗಿರುವ ಹಾಗೂ ನ್ಯಾಕ್ ತಯಾರಿಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿ ವೃಂದದ ಅಮೋಘ ಸೇವೆಯನ್ನು ಕಾಲೇಜಿನ ಆಡಳಿತ ಮಂಡಳಿಯು ಸ್ಮರಿಸಿದೆ.