ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊರುವ ಮುಂದಿನ ಆನೆ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದ್ದು, ನಿವೃತ್ತಿಯಾಗಿರುವ ಅಭಿಮನ್ಯು ಬಳಿಕ ಧನಂಜಯ ಆನೆಯ ಹೆಸರು ಮುಂಚೂಣಿಗೆ ಬಂದಿದೆ.
ಅಂಬಾರಿ ಹೊರುವ ಆನೆ ಆಯ್ಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದು, ಧನಂಜಯನೇ ಮುಂದಿನ ಅಂಬಾರಿ ಆನೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಆನೆಗಳ ನಡುವೆ ಚಿನ್ನದಂಬಾರಿ ಹೊರುವ ಜವಾಬ್ದಾರಿಗಾಗಿ ಪೈಪೋಟಿ ಇದ್ದರೂ, ತಾಲೀಮಿನ ಹಲವು ಹಂತಗಳ ಪರಿಶೀಲನೆಯ ಬಳಿಕ ಧನಂಜಯನ ಹೆಸರು ಮುನ್ನೆಲೆಗೆ ಬಂದಿದೆ. ಧನಂಜಯನ ಸಾಮರ್ಥ್ಯ, ಗಾಂಭೀರ್ಯ ಹಾಗೂ ತಾಲೀಮಿನಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಅರಣ್ಯ ಇಲಾಖೆ ಗಮನ ಕೇಂದ್ರೀಕರಿಸಿದೆ.
ಅಂಬಾರಿ ಆನೆ ಆಯ್ಕೆ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದ್ದು, ಅಂತಿಮ ನಿರ್ಧಾರವನ್ನು ಅರಣ್ಯ ಇಲಾಖೆ ಅಧಿಕೃತವಾಗಿ ಪ್ರಕಟಿಸಬೇಕಿದೆ. ಹೀಗಾಗಿ ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಧನಂಜಯ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊರುತ್ತಾನೆಯೇ ಎಂಬ ಕುತೂಹಲ ಮೈಸೂರು ಜನರಲ್ಲಿ ಮೂಡಿದೆ.















