20 ನವಿಲುಗಳ ನಿಗೂಢ ಸಾವು: ತನಿಖೆಗೆ ಸಚಿವ ಖಂಡ್ರೆ ಆದೇಶ

ತುಮಕೂರು: ಕರ್ನಾಟಕದಲ್ಲಿ ವನ್ಯಜೀವಿಗಳ ಸರಣಿ ಸಾವು ಪ್ರಕರಣ ಮುಂದುವರೆದಿದ್ದು, 4 ಹುಲಿಗಳ ಸಾವು ಪ್ರಕರಣ ಹಸಿರಾಗಿರುವಂತೆಯೇ ಇತ್ತ 20 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ.

ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 15 ಹೆಣ್ಣು ಸೇರಿ ಒಟ್ಟು 20 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆ ಆಗಿದೆ.

ಬೆಳಗ್ಗೆ ರೈತರು ಜಮೀನಿಗೆ ಬಂದಾಗ ನವಿಲುಗಳ ಮೃತದೇಹಗಳು ಪತ್ತೆ ಆಗಿದ್ದು, ಆಗಸ್ಟ್ 1ರ ರಾತ್ರಿ ನವಿಲುಗಳು ಮೃತಪಟ್ಟ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ನವಿಲುಗಳ ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ನವಿಲುಗಳು ಮೃತಪಟ್ಟಿರಬಹುದು ಅಥವಾ ಯಾರಾದರೂ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದು, ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.