ಆಪತ್ಕಾಲದ “ದೇವ ಮಂದಿರ” ಮೈಮುನಾ ಫೌಂಡೇಶನ್: ನೆಲೆಯಿಲ್ಲದವರಿಗೆ ಸ್ಪೂರ್ತಿ ಸೆಲೆಯಾದ ಆಪದ್ಭಾಂಧವ ಆಸೀಫ್ ಕತೆ ಇದು

ಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ, ಅವರು ದೇವರಿಗೆ ಹತ್ತಿರವಾದವರು” ಎನ್ನುತ್ತದೆ ವೇದವಾಣಿ. ಇದು ನೂರಕ್ಕೆ ನೂರರಷ್ಟು ಸತ್ಯ. ಇದನ್ನೇ ಸ್ವಾಮಿ ವಿವೇಕಾನಂದರು “ಎಲ್ಲರೂ ಭಗವಂತನ ರೂಪಗಳೇ” ಎನ್ನುತ್ತಾರೆ.
ಆ ರೂಪಗಳು ನಮ್ಮ ಕಣ್ಣಮುಂದೆ ಬೇರೆ ಬೇರೆಯಾಗಿ ಕಂಡು ಬರುತ್ತವೆ. ದೀನರಂತೆ, ಹುಚ್ಚರಂತೆ, ರೋಗಿಯಂತೆ, ಆಶಕ್ತರಂತೆ, ದುರ್ಬಲರಂತೆ, ನಿರ್ಬಲರಂತೆ, ದುಃಖಿಗಳಂತೆ, ದಿವ್ಯಾಂಗಿಗಳಂತೆ ಭಿಕ್ಷುಕರಂತೆ, ಹೀಗೆ ಲೋಕದ ಸಂತೆಯೊಳಗೆ ಅನೇಕರು ನಾನ ತರದವರಿದ್ದಾರೆ. ಈ ರೀತಿ ನರಳುತ್ತಿರುವವರು ಸಾವಿರಾರು ಜನ ಕಣ್ಣಮುಂದೆ ಇದ್ದಾರೆ. ಆದರೆ ಅವರನ್ನು ದೂರದಲ್ಲೆ ಕಂಡು ತಿರುಗಿ ಹೋಗುವವರೇ ಜಾಸ್ತಿ. ನೋಡಿ ಮರುಗುವವರು ಕಡಿಮೆ. ಅವರ ಹತ್ತಿರ ಹೋಗಿ ಸೇವೆ ಮಾಡುವವರು ಎಷ್ಟು ಜನ? ಇಂತಹ ನಿರ್ಬಲರನ್ನು ಮತ್ತೆ ದುರ್ಬಲರನ್ನಾಗಿಸದೆ ಸಬಲರನ್ನಾಗಿಸುವುದೇ ದೇವರ ಪೂಜೆ. ಭಗವಂತನ ಸೇವೆಯಾಗಿದೆ ಎನ್ನುತ್ತಾರೆ ಸಿಡಿಲ ಸಂತ ಸ್ವಾಮಿ ವಿವೇಕಾನಂದರು. ಅದೇ ಸೇವಾ ಕ್ಷೇತ್ರದ ದೇವ ಮಂದಿರ ಹಲವರ ಹೃದಯ ಮಂದಿರ ಸೇವಾ ಸದನ, ಮೂಲ್ಕಿ ಕಾರ್ನಾಡ್ ಸಮೀಪದ ಮೈಮುನಾ ಫೌಂಡೇಶನ್ ಎಂದರೆ ತಪ್ಪಾಗಲಾರದು.
ನಿರಾಶ್ರಿತರ ಮನಕ್ಕೆ ಮನೆಯಾದ ಮೈಮುನಾ:
ಅನೇಕ ಜನ ಇದ್ದಾರೆ, ಬೇಕಾದಷ್ಟು ಇರುವವರು. ಆದ್ರೆ ಅದಕ್ಕಿಂತ ದುಪ್ಪಟ್ಟು ನಿರ್ಗತಿಕರು, ಅಶಕ್ತರು, ದುರ್ಬಲರು, ಎಲ್ಲ ಇದ್ದು ನೆಮ್ಮದಿ ಕಳಕೊಂಡ ಹಿರಿ-ಹಿರಿಯರು, ಕೌಟುಂಬಿಕ ಜೀವನದ ಮಾನಸಿಕ ವೇದನೆಗೆ ಒಳಗಾಗಿ ನಿರಾಶ್ರಿತರಾದವರು, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು, ಬೀದಿ ಅಲೆಮಾರಿಗಳಾದವರು, ಹೀಗೆ ನಾನ ರೂಪದ ನರಳಾಡುತ್ತಿರುವವರು ಸಹಸ್ರ ಜನ. ಅಂತವರಿಗೆ ಸಾಂತ್ವಾನ ಸಮಾಧಾನ, ನೆಮ್ಮದಿಯ ಆಶ್ರಯ ಎಲ್ಲಿದೆ? ಯಾರಲ್ಲಿದೆ? ಎಂಬುದು ದೊಡ್ಡ ಪ್ರಶ್ನೆ. ಎಲ್ಲ ಇದ್ದು ಇಲ್ಲದವರಿಗೂ ಏನು ಇಲ್ಲದೆ ಮರುಗುವ ಹಿರಿಕಿರಿ ಜೀವಗಳ ನಡುವಿಗೂ “ನಾವಿದ್ದೇವೆ ನಿಮ್ಮೊಂದಿಗೆ” ಎನ್ನುತ್ತಾ ಭರವಸೆಯ ಆಶಾಕಿರಣ ಮೂಡಿಸಿ ಕೈಜೋಡಿಸುತ್ತಿರುವ ಮೈಮುನಾ ಫೌಂಡೇಷನ್ ಕಾರ್ಯ ಶ್ಲಾಘನೀಯ.
ಮನೆ ಬಿಟ್ಟವರಿಗೆ ಆಲಯವಾಗಿ, ಮಾನಸಿಕ ಅಸ್ವಸ್ಥರಿಗೆ ಮನಸರಳಿಸುವ ತಾಣವಾಗಿ , ಅಲೆಮಾರಿ, ನಿರಾಶ್ರಿತರುಗಳಿಗೆ ಆಶ್ರಯ ಧಾಮವಾಗಿ, ದಿಕ್ಕು ದಿವಾಳಿ ಇಲ್ಲದವರಿಗೆ ಹೊಸ ಬದುಕಿನ ದಿಕ್ಕಾಗಿದೆ. ಅನಾರೋಗ್ಯ ಪೀಡೀತರಿಗೆ ಆರೋಗ್ಯಾಲಯವಾಗಿದೆ. ಅಲ್ಲಿನ ಆಶ್ರಮದ ನಿವಾಸಿಗಳು ಮಂದಹಾಸ ಬೀರುತ್ತಿದ್ದಾರೆ. ಪ್ರತಿದಿನವು ಹೊಸಭರವಸೆಯೊಂದಿಗೆ ಕತ್ತಲಲ್ಲಿರುವವರನ್ನು ಹೊಸಬೆಳಕಿತ್ತ ದಾಪುಗಾಲಿಟ್ಟು ನವಜೀವನವನ್ನು ನೀಡಿ ಸಾಗುತ್ತಿದೆ ಮೈಮುನಾ ರಿಹ್ಯಾಬಿಲಿಟೇಶನ್ ಕೇಂದ್ರ. ಆ ಮೂಲಕ ಭಗವಂತನ ಮಕ್ಕಳ ಕಾರ್ಯದಲ್ಲಿ ಸಾರ್ಥಕತೆಯ ಸೇವೆಯನ್ನು ಫೌಂಡೇಶನ್ ಸಲ್ಲಿಸುತ್ತಿದೆ.
ಪಯಣದ ನೇತಾರ ಆಸೀಫ್ ಎಂಬ ಆಪತ್ಬಾಂಧವ:
ಮೈಮುನಾ ಫೌಂಡೇಶನ್ ನ ಶಕ್ತಿ, ಯುಕ್ತಿ ಯಾರೂ ಅಂದರೆ, ಆಪದ್ಭಾಂಧವ ಆಸೀಫ್. ಆಸಿಪ್ ರವರ ಬದುಕು ಎಲ್ಲರಿಗೂ ಸ್ಫೂರ್ತಿಯ ಚಿಲುಮೆ. ಕಣ್ಣಿಗೆ ಕಾಣುವ ಅರ್ತರನ್ನು ಕಂಡಾಗ ಅವರಿಗೆ ನೆರವಾಗಬೇಕೆನ್ನುವ ಅದಮ್ಯ ಉತ್ಸಾಹ. ಅಶಕ್ತರ ಬದುಕನ್ನು ಹಸನುಗೊಳಿಸಬೇಕೆನ್ನುವ ಹಂಬಲ. ಇವೆಲ್ಲ ಸಾಕಾರ ಅವರು ಹುಟ್ಟುಹಾಕಿದ ಮೈಮುನಾ ಫೌಂಡೇಶನ್ ಮೂಲಕ ನೆರವೇರುತ್ತಿದೆ.
ಕಾರ್ಕಳದ ಸಾಣೂರು ಗ್ರಾಮದ ಮೋಯ್ದಿನ್ ಬ್ಯಾರಿ ಹಾಗೂ ಮೈಮುನಾ ದಂಪತಿಗಳ ಸುಪುತ್ರನಾಗಿ ಸಾಣೂರಿನಲ್ಲಿ ಜನಿಸಿದ ಆಸೀಫ್ ಹೆಚ್ಚು ವಿದ್ಯಾಭ್ಯಾಸ ಇಲ್ಲದಿದ್ದರು ಹಲವರ ಬದುಕಿನ ದಾರಿದೀಪದ ಬೆಳಕು. ಎಲ್ಲಾ ವರ್ಗದ ಜನರ ಪ್ರೀತಿಯನ್ನು ಗಳಿಸಿದ ಮೇರುವ್ಯಕ್ತಿತ್ವ.
2012ರಿಂದ 2018ರವರೆಗೆ ಸಾಣೂರು ದರ್ಗಾದ ಅಧೀನದಲ್ಲಿರುವ ಸಾಣೂರು ಗೈಸ್ ಫೆಡರೇಶನ್ ಇದರ ಅಧ್ಯಕ್ಷರಾಗಿ , ಹಲವಾರು ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಮಾಡುವುದರ ಮೂಲಕ ಅನೇಕ ಹೆಣ್ಣು ಮಕ್ಕಳ ಬಾಳಿಗೆ ಹೆಗಲಾದ ಸಾರ್ಥಕ ಭಾವ. ಜಾತಿ-ಮತ ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯದ ನೆರವನ್ನು ನೀಡಿದ ಕೊಡುಗೈ ದಾನದ ನಿಷ್ಕಲ್ಮಶ ಮನಸು.
ಆಕಸ್ಮಿಕ ಅಪಘಾತಗಳಿಗೆ ಒಳಗಾಗಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಜೀವಗಳಿಗೆ ‘”ಆಪತ್ಬಾಂಧವ ಆಂಬುಲೆನ್ಸ್ “
ಮೂಲಕ ಕಲ್ಪತರು. ಈಗಾಗಲೇ ಎಂಟು ವರ್ಷಗಳ ಅಂಬುಲೆನ್ಸ್ ಚಾಲಕರಾಗಿ, ಮುಲ್ಕಿ ,ಪಡುಬಿದ್ರಿ ,ಉಡುಪಿ, ಮಂಗಳೂರು ,ಈ ಭಾಗದಲ್ಲಿ ಮೂರುವರೆ ಸಾವಿರಕ್ಕಿಂತಲೂ ಹೆಚ್ಚು ಮೃತದೇಹಗಳನ್ನು ಸಾಗಿಸಿದ ಕೀರ್ತಿ ಇವರದ್ದು.
ಮರಣದ ಮನೆಯಿರಲಿ, ಮಸಣದ ದಾರಿ ಇರಲಿ, ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವ ರೋಗಪೀಡಿತನೇ, ಇರಲಿ ಬಿಲ್ಲು ಪಾವತಿಗೆ ಹಣವಿಲ್ಲದೆ ಪರದಾಡುತ್ತಿರುವ ನೆರವಿಗೆ ಧಾವಿಸಿ ದುಗುಡ, ದುಮ್ಮಾನಗಳಿಗೆ ಸ್ಪಂದಿಸಿ, ಅಶಕ್ತರ ಪಾಲಿಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿರುವ ಅಪತ್ಕಾಲದ ಸ್ನೇಹಿತ ಈ ಅಸೀಫ್.
ತಾಯಿಯ ಸ್ಮರಣಾರ್ಥ ಹುಟ್ಟಿತು ಮೈಮುನಾ:
ತಾಯಿಯ ಸ್ಮರಣಾರ್ಥವಾಗಿ, ಮೈಮುನಾ ಪೌಂಡೇಶನ್ (ರಿ.)ಸ್ಥಾಪಿಸಿ ಅದರಡಿ ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಶನ್ ಸೆಂಟರ್ ಮೂಲಕ ನಿರ್ಗತಿಕರು, ಅನಾಥರು, ಮಾನಸಿಕ ಅಸ್ವಸ್ಥರು, ಕ್ಯಾನ್ಸರ್ ರೋಗಿಗಳು, ಟಿಬಿ ಕಾಯಿಲೆಗೆ ತುತ್ತಾದವರು, ಏಡ್ಸ್ ಸಂಬಂಧಿತ ಕಾಯಿಲೆಗೆ ತುತ್ತಾದವರಿಗೆ ನೆಲೆ ಕಲ್ಪಿಸಿ ಆಶ್ರಯದಾತರಾಗಿದ್ದಾರೆ‌.
ಮುಲ್ಕಿ ಲಯನ್ಸ್ ಕ್ಲಬ್ ಹಾಗೂ ಮೂಲ್ಕಿ ಆರೋಗ್ಯ ಸಮುದಾಯ ಕೇಂದ್ರ, ಜಂಟಿಯಾಗಿ 2016 ರಲ್ಲಿ ಸ್ಥಾಪಿಸಿದ, ಶವಗಾರವನ್ನು ಆಸೀಫರಿಗೆ ಅರ್ಪಿಸಿದಾಗ ಯಾವುದೇ ಫಲಾಪೇಕ್ಷೆ ಇಲ್ಲದೆ ರಾತ್ರಿ-ಹಗಲೆನ್ನದೆ ಶೀತಲೀಕರಣ ಶವಗಾರದಲ್ಲಿ ಸಾವಿರಕ್ಕೂ ಮಿಕ್ಕ ಮೃತದೇಹಗಳ ನ್ನು ಇಟ್ಟು ಸಹಕರಿಸಿದ ಸೇವಾದಾಯೀ.
ಸೋಂಕಿತ, ಶಂಕಿತ, ಸಂತ್ರಸ್ತ ಎನ್ನುತ ಜನ ಹತ್ತಿರ ಬರುವುದಕ್ಕೆ ಹಿಂದಡಿ ಇಡುತ್ತಿರುವಾಗ, ಮುಂದಡಿ ಇಟ್ಟು ತೋರಿದ ಹೃದಯ ವೈಶಾಲ್ಯದ ಆಪತ್ಭಾಂಧವರ ದೇವಗುಣ ಮೆಚ್ಚುವಂತದ್ದೇ. ಹಾಗೆಯೇ ಸಾಮಾಜಿಕ ಸಹಭಾಗಿತ್ವದ ತೆರೆದ ವ್ಯಕ್ತಿತ್ವಕ್ಕೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ, ಸ್ವಯಂ ಪ್ರೇರಣೆಯಿಂದ ಅನಾಥ ಶವಗಳಿಗೆ ಜಾತಿ-ಮತಭೇದವಿಲ್ಲದೆ, ಅವರವರ ಸಂಸ್ಕಾರಕ್ಕೆ ಅನುಗುಣವಾಗಿ, ಶವಸಂಸ್ಕಾರವನ್ನು ಮಾಡಿದ ಕೀರ್ತಿಗೂ ಪಾತ್ರ. ಇದಕ್ಕೆ ನಿದರ್ಶನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಅನೇಕ ಉದಾಹರಣೆಗಳು, ಅವುಗಳಿಗೆ ವ್ಯಕ್ತವಾದ ಪ್ರಶಂಸನೆಗಳೇ ಸಾಕ್ಷಿ. ಯಾವುದೇ ವರಿ ಇಲ್ಲದ ಈ ಹೊತ್ತಿನ ವಾರಿಯರ್ಸ್ ಕೂಡಾ ಇವರು.
ದನಿವರಿಯದ ಇವರ ಸೇವೆಯನ್ನು ಗುರುತಿಸಿ 2018ರ ಗಡಿನಾಡ ಪ್ರಶಸ್ತಿ, 2021ರ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಪ್ರತಿಷ್ಠಿತ ಆಂಗ್ಲ ಪತ್ರಿಕೆ “ಡೆಕ್ಕನ್ ಹೆರಾಲ್ಡ್” ಕೊಡಮಾಡಿದ ಕರ್ನಾಟಕ ಚೇಂಜ್ ಮೇಕರ್ ಪ್ರಶಸ್ತಿ ಯನ್ನು ಕರ್ನಾಟಕ ಸರ್ಕಾರದ ಮಾನ್ಯ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ರವರಿಂದ ಸ್ವೀಕರಿಸಿದ 21 ಸಾಧಕರಲ್ಲಿ ಇವರುಕೂಡ ಒಬ್ಬರು. ಹತ್ತು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ, ಗೌರವ ಆಧಾರಗಳಿಗೆ ಭಾಜನಕ್ಕೆ ಪಾತ್ರರೂ ಕೂಡ. ಅವೆಲ್ಲವನ್ನು ಬದಿಗಿಟ್ಟು ಸದಾ ಸೇವೆಯಲ್ಲಿ ಸಿದ್ಧ ಬುದ್ಧ ವ್ಯಕ್ತಿತ್ವ.
ಆಪತ್ಭಾಂದವ ಆಸೀಫ್ ರವರು ಎಷ್ಟೋ ಜನ ಹಿತೈಷಿಗಳ ಸಹಕಾರ, ಪ್ರೇರಣೆಯಡಿ ಜನಸೇವಾ ಕಾರ್ಯದಿಂದ ಜನಮನದ ಹೃದಯ ನಿವಾಸಿಯಾಗಿದ್ದಾರೆ, ಪ್ರತಿಫಲಾಪೇಕ್ಷೆ ಇಲ್ಲದ ಅವರ ಕಾರ್ಯಕ್ಕೆ ಬೆನ್ತಟ್ಟುವ, ನೆರವಾಗುವ, ಕೈಜೋಡಿಸುವ, ಏನಂತೀರಾ?
ಮುಕ್ತ ಮನಸು (ಸಂತೋಷ್ ನೆಲ್ಲಿಕಾರು)
ಉಪನ್ಯಾಸಕರು ಜ್ಞಾನಸುಧಾ ಕಾಲೇಜು ಕಾರ್ಕಳ