ನನ್ನ ಅಕ್ಕನನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಸಿಕೊಂಡಿದ್ದಾರೆ: ಸಂತ್ರಸ್ತ ಯುವತಿಯ ಸಹೋದರ ಆರೋಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನನ್ನ ಅಕ್ಕನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ಸಿಡಿಲೇಡಿಯ ಸಹೋದರ ಆರೋಪಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್​ ವಿಚಾರವಾಗಿ ಸಿಡಿ ಯುವತಿಯ ಪೋಷಕರು ಇಂದು ಸುದ್ದಿಗೋಷ್ಠಿ ನಡೆಸಿದರು.

ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ, ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಬ್ಬ ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಸಂತ್ರಸ್ತೆ ಸಹೋದರ ಹೇಳಿದರು.

ಮಾರ್ಚ್ 2ರಂದು ಸಿಡಿ ಪ್ರಕರಣದ ಬೆಳಕಿಗೆ ಬಂದಾಗ ನನ್ನ ಅಕ್ಕನ ಜತೆ ಮೊಬೈಲ್​ನಲ್ಲಿ ಚರ್ಚಿಸಿದ್ದ ಆಡಿಯೋ ವೈರಲ್​ ಆಗಿದೆ. ನನ್ನ ಅಕ್ಕನ ಮೊಬೈಲ್​ ಸ್ವಿಚ್​​ಆಫ್​ ಆಗಿತ್ತು. ನಮ್ಮ ಅಕ್ಕನನ್ನು ತಂದು ಕೊಡುವಂತೆ ಯುವತಿ ತಮ್ಮ ಮನವಿ ಮಾಡಿದ್ದಾರೆ. ಮಾರ್ಚ್ 2ರಂದು ಡಿಕೆಶಿ ನಿವಾಸದ ಬಳಿ ತೆರಳಿದ್ದಳು ಎಂದು ಹೇಳಿದ್ದಾರೆ.

ನಮ್ಮ ಅಕ್ಕನನ್ನು ಬೆಂಗಾವಲಿನಲ್ಲಿ ಗೋವಾಗೆ ಕಳುಹಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಮ್ಮಕ್ಕ ಎಲ್ಲೂ ಕಾಣಲಿಲ್ಲ. ನಿಮ್ಮ ಹೊಲಸು ರಾಜಕಾರಣಕ್ಕಾಗಿ ನಮ್ಮಕ್ಕನ ಬಳಸಿದ್ದಾರೆ. ನೀವು ಗಂಡಸರೇ ಆಗಿದ್ದರೆ ಮುಖಾಮುಖಿ ಹೋರಾಡಿ. ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡಬೇಡಿ. ನಮ್ಮ ಅಕ್ಕನನ್ನು ಬಿಟ್ಟುಬಿಡಿ ಎಂದು ಸಹೋದರ ಮನವಿ ಮಾಡಿದರು.