ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ, ಇದೀಗ ಭಾರತದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ತಮ್ಮ ವಿಡಿಯೋಗಳನ್ನು ‘ಸಾಮಾಜಿಕ ಸೇವೆ’ ಎಂದು ಬಣ್ಣಿಸಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರ್‌ವಿಸಿಜೆ ಮೂವೀಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪೂನಂ ಪಾಂಡೆ, ತಮ್ಮ ಹಾಟ್ ವಿಡಿಯೋಗಳು ಒತ್ತಡದಲ್ಲಿರುವ ಜನರಿಗೆ, ವಿಶೇಷವಾಗಿ ಪುರುಷರಿಗೆ, ನೆಮ್ಮದಿ ನೀಡಲು ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.

‘ನನ್ನ ವಿಡಿಯೋ ಒಬ್ಬರಿಗೆ ನೆಮ್ಮದಿ ನೀಡಿದರೆ ತಪ್ಪೇನು?’
ತಮ್ಮ ವಿಡಿಯೋಗಳನ್ನು ಸಮರ್ಥಿಸಿಕೊಂಡಿರುವ ಪೂನಂ, ಜನರು ಸಾಕಷ್ಟು ಒತ್ತಡದಲ್ಲಿದ್ದಾರೆ. ತಮ್ಮ ಒಂದು ವಿಡಿಯೋ ಯಾರಿಗಾದರೂ ನೆಮ್ಮದಿ ನೀಡಲು ಸಹಾಯ ಮಾಡಿದರೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ತಮ್ಮ ವಿಡಿಯೋಗಳನ್ನು ಸುಂದರವಾಗಿ ಚಿತ್ರೀಕರಿಸಲಾಗುತ್ತದೆ ಎಂದೂ ಹೇಳಿದ್ದಾರೆ.
ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಲಿ
ಇದೇ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಮಾತನಾಡಿದ ಪೂನಂ ಪಾಂಡೆ, ಭಾರತದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಮಹಿಳೆಯರ ವಿರುದ್ಧ ನಡೆಯುವ ಕೆಲವು ಅಪರಾಧಗಳು ಕಡಿಮೆಯಾಗಬಹುದು ಎಂಬುದು ತಮ್ಮ ಅನಿಸಿಕೆ ಎಂದು ಹೇಳಿದ್ದಾರೆ.

ಟ್ರೋಲಿಂಗ್‌ಗೆ ಬೇಸರ, ಕೆಲವೊಮ್ಮೆ ಕೋಪ
ತಮ್ಮ ಹೇಳಿಕೆಗಳು ಹಾಗೂ ವಿಡಿಯೋಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಮತ್ತು ಟ್ರೋಲಿಂಗ್ ಎದುರಿಸುತ್ತಿರುವುದಾಗಿಯೂ ಪೂನಂ ಹೇಳಿದ್ದಾರೆ. ತಮ್ಮ ಕೆಲವು ಸ್ನೇಹಿತರು ಹಾಗೂ ಸೆಲೆಬ್ರಿಟಿ ಪರಿಚಯಸ್ಥರು ಕೂಡ ವಿಡಿಯೋಗಳನ್ನು ನೋಡಿದ ಬಳಿಕ ತಮ್ಮನ್ನು ತಮಾಷೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಟ್ರೋಲ್‌ಗಳ ಕಾಮೆಂಟ್‌ಗಳನ್ನು ಓದಿದಾಗ ಕೆಲವೊಮ್ಮೆ ತೀವ್ರ ಕೋಪ ಬರುತ್ತದೆ. ಅದೇ ರೀತಿಯಲ್ಲಿ ಕಠಿಣವಾಗಿ ಪ್ರತಿಕ್ರಿಯಿಸಬೇಕು ಎನಿಸಿದರೂ, ಬಳಿಕ ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸುಮ್ಮನಾಗುತ್ತೇನೆ ಎಂದು ಹೇಳಿದ್ದಾರೆ. ತಮ್ಮನ್ನು ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೂನಂ, “ನೀವು ಯಾರು? ಕಮೆಂಟ್ ಮಾಡಲು ಯಾರು ನೀವು?” ಎಂದು ಪ್ರಶ್ನಿಸಿದ್ದಾರೆ. ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.















