ನಕ್ಷತ್ರದ ಹಾಗೆ ಮಿರಿ ಮಿರಿ ಮಿಂಚುವ ನನ್ನ ಕಿವಿಯೋಲೆಯ ಕತೆಯಿದು: ಸ್ವಾತಂತ್ರ್ಯ ಬರೆದ ತಣ್ಣಗಿನ ಬರಹ

      ಸ್ವಾತಂತ್ರ್ಯ ಎನ್ ಹೊನ್ನಾವರ

ಕಿ

ವಿಯೋಲೆ ಅಂದ್ರೆ ನನ್ನಂತ ಕೆಲವರಿಗಂತೂ ಬಣ್ಣ ಬಣ್ಣದ ಕನಸಿನ ಹಾಗೆ, ನಕ್ಷತ್ರಗಳ ಬೆಳಕಿನ ಹಾಗೆ, ಮನದಾಳದ ಹಾಡಿನ ಹಾಗೆ, ಮಳೆಯ ಹಾಗೆ, ಕೊಳಲ ಇಂಪಿನ ಹಾಗೆ, ಇನ್ನೂ ಏನೇನೋ. ಒಂದೊಂದು ಕಿವಿಯೋಲೆಗೂ ಒಂದೊಂದು ಕಥೆ, ಒಂದೊಂದು ನೆನಪು.

ಜಾತ್ರೆಯಲ್ಲಿ ರಾಶಿ ಜನಗಳ ಮಧ್ಯೆ ಚಕ ಪಕ ನಕ್ಷತ್ರದ ಹಾಗೆ ಹೊಳೆಯುವ ಆ ಕಿವಿಯೋಲೆಯ ಅಂಗಡಿಯನ್ನ ನೋಡದೆ, ಮಾತನಾಡಿಸದೆ, ಸ್ಪರ್ಶಿಸದೆ, ಇಷ್ಟವಾದ್ರೆ ಕೊಳ್ಳದೆ ಇರೋಕ್ಕೆ ಸಾಧ್ಯವೇ ಇಲ್ಲ. ಒಂದಕ್ಕಿಂತ ಒಂದು ಚಂದ. ಒಂದೇ ಕೊಂಡರೆ ಇನ್ನೊಂದಕ್ಕೆ ಬೇಸರ ಆಗಲ್ವ? ಇನ್ನೊಂದು ಕೊಂಡರೆ ಮತ್ತೊಂದಕ್ಕೆ ಬೇಸರ ಆಗುತ್ತೆ. ಅದು, ಇದು ಅಂತ ಕಿವಿಯೋಲೆಗಳ ರಾಶಿ ರಾಶಿ ಬಣ್ಣಗಳಲ್ಲಿ ಜಾತ್ರೆಯೇ ಮರೆತು ಹೋಗುತ್ತೆ.

“ಯಾರ ಕಿವಿಯ ಮೇಲೆ ಯಾವ ಓಲೆಯ ಹೆಸರಿದೆಯೋ” ಅಂತ ನೋಡುತ್ತಾ ಇರುವಾಗ ಅಮ್ಮ ಪಟ್ ಅಂತ ತಲೆಗೆ ಹೊಡೆದು “ಮನೇಲಿ ಅಷ್ಟೊಂದು ಇದೆ ಮತ್ತೆಂತಕ್ಕೆ ನಿಂಗೆ , ಸುಮ್ನೆ ಬಾ ” ಅಂತ ಸರಿ ಬೈದು ಹಾಕಿದ್ರೂ ಕದ್ದು ಮುಚ್ಚಿ ಅಜ್ಜಿಯ ಹತ್ರ ಹೋಗಿ ” ನೀನು ನನ್ನ ಮುದ್ದಿನ ಅಜ್ಜಿ ಅಲ್ವಾ” ಅಂತ ಹೇಳ್ತಲೋ ಅಥವಾ ಅಪ್ಪನತ್ರ ಹೋಗಿ ” ನಾನ್ ನಿನ್ನ ಮುದ್ದಿನ ಮಗಳಲ್ವಾ ” ಅಂತ ಪುಸಲಾಯಿಸುತ್ತಲೋ ಒಂದೆರಡು ಓಲೆಗಳನ್ನ ತರೋದ್ರಲ್ಲಿ ಇರೋ ಸುಖವೇ ಬೇರೆ.

 ನಮ್ಮಿಷ್ಟದ ಯಾರೋ ಹುಟ್ಟುಹಬ್ಬ ಅಂತಲೋ, ಹಾಗೆ ಸುಮ್ಮನೆ ಅಂತಲೋ ಕಿವಿಯೋಲೆಯನ್ನ ಉಡುಗರೇಯಾಗಿ ಕೊಟ್ಟು ಬಿಟ್ಟರೆ.ಅಬ್ಭಾ ! ಅಮ್ಮ ಈಗಷ್ಟೆ ಮಾಡಿಟ್ಟ ಸಿಹಿ ಸಿಹಿ ರವೆ ಉಂಡೆ ತಿಂದಷ್ಟೇ ಖುಷಿ ಆಗುತ್ತೆ. ಆ ಕಿವಿಯೋಲೆ ಕಿವಿಯ ಕುರ್ಚಿಮೇಲೆ ಕುಳಿತ ತಕ್ಷಣ ಥಟ್ ಅಂತ ಮುಖಕ್ಕೆ ಟಿವಿಯಲ್ಲಿ ಬರೋ ಫೇರೇನ್ ಲವ್ಲೀ ಹುಡುಗಿಗಿಂತ ಹೆಚ್ಚಿನ ಹೊಳಪು ಬಂದು ಬಿಡುತ್ತೆ.

ಆಮೇಲೆ, ಈ ಓಲೆಗಳನ್ನ ಕೂಡಿಡುವುದ್ರಲ್ಲು ಒಂಥರಾ ಖುಷಿ ಇದೆ. ರಾಶಿ ರಾಶಿ ಓಲೆಗಳನ್ನ ಡಬ್ಬಿಯಲ್ಲಿ ನೋಡಿದಾಗ ಎಲ್ಲ ಕನಸು ಒಟ್ಟಿಗೆ ಬಂದಂತೆ. ಕೆಲವದರ ಮುತ್ತು ಜಾರಿರುತ್ತೆ, ಕೆಲವು ಮಲಗಿ ಇರುತ್ತೆ, ಇನ್ನೂ ಕೆಲವು ತನ್ನ ಜೋಡಿಯ ಹುಡುಕಾಟದಲ್ಲಿರುತ್ತೆ, ಮತ್ತೆ ಕೆಲವು ಮೂಲೆಯಲ್ಲಿ ಅಡಗಿ ಕುಳಿತಿರುತ್ತೆ. ಇವೆಲ್ಲದನ್ನ ಜೋಡಿಸಿ ಇಡೋದು ಅಂದ್ರೆ ಮಳೆಯಲ್ಲಿ ನೆಂದಷ್ಟೇ, ನೆಂದು ಬಿಸಿ ಬಿಸಿ ಚಾ ಕುಡಿದಷ್ಟೇ ಖುಷಿ.

ತುಂಬಾ ಇಷ್ಟವಾದ ಕಿವಿಯೋಲೆ ಎಲ್ಲೋ ಕಾಣೆಯಾಗಿ ಮತ್ತೆ ಸಿಕ್ಕಾಗ, ಬಾಲ್ಯದ ಗೆಳತಿಯೊಬ್ಬಳು ಬಸ್ಟ್ಯಾಂಡ್ನಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಹಾಗೆ ಆಗುತ್ತೆ. ಸಾವಿರ ಓಲೆಗಳಿದ್ದರು ಇಷ್ಟದ ಕೆಲವೊಂದು ಓಲೆಗಳನ್ನ ಮಾತ್ರ ಧರಿಸೋದು ಸಾಮಾನ್ಯವಾಗಿ ನನ್ನಂತಹ ಕೆಲವರ ಹುಟ್ಟು ಗುಣ. ಸುಟ್ಟರೂ ಹೋಗಲ್ಲ. ಎಲ್ಲದನ್ನ ಸರಿ ಸಾಮಾನವಾಗಿ ನೋಡಿ ಸಮಾನತೆ ಕಾಪಾಡಿ ಹಾಕಿಕೊಳ್ಳೋದು ಇನ್ನೂ ಕೆಲವರ ದೊಡ್ಡ ಗುಣ. ಎಲ್ಲೆಲ್ಲೋ ಯಾವ್ಯಾವ್ದೋ ಓಲೆ ಹಾಕೋದು ಮತ್ತುಕೆಲವರ ಹುಚ್ಚು ಗುಣ.

ಅದೇನೇ ಆದ್ರೂ ಒಲೆಗಳನ್ನ ಪ್ರೀತಿಸಿ, ಅದ್ರಲ್ಲಿ ಸಾವಿರ ಕನಸುಗಳನ್ನ ಕಂಡು, ಮನೆಯವರನ್ನೆಲ್ಲ ಎದುರಿಸಿ ಮತ್ತೆ ಮತ್ತೆ ಖರೀದಿ ಮಾಡೋದು ಅಂದ್ರೆ ಚಿಕ್ ವಿಷ್ಯಾ ಅಲ್ವೇ ಅಲ್ಲ. ಅದೊಂಥರಾ ಮನೆಯಲ್ಲಿ ಒಪ್ಪದೇ, ಕಿಸಿವಿಸಿಯಾಗಿ, ನಂತ್ರ ಸ್ವಲ್ಪ ಸಮಾಧಾನ ಆಗಿ ಮತ್ತೆ ಇನ್ ಸ್ಟಾಲ್ ಮೆಂಟ್ ನಲ್ಲಿ  ಒಪ್ಪಿಗೆ ಕೊಡುತ್ತ ಮಾಡಿಸಿದ ಲವ್ ಮ್ಯಾರೇಜ್ ಹಾಗೆ !

ಸ್ವಾತಂತ್ರ್ಯ ಹೊನ್ನಾವರ  ಮೂಲತಃ . ಜಿಲ್ಲೆಯ ಹೊನ್ನಾವರದವರು. ಪ್ರಸ್ತುತ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ, ಸಂಗೀತವನ್ನೇ ಧ್ಯಾನಿಸುವ ಇವರು ಸೃಜನಶೀಲ ಸಂಗೀತಗಾರ್ತಿ, ಚಿತ್ರಕಲೆಯಲ್ಲಿಯೂ ಇವರಿಗೆ ಅಪಾರ ಆಸಕ್ತಿ